ಹೊಂಬಾಳೆ ಫಿಲಂಸ್ ಸಂಸ್ಥೆಯು ಕೆಲವು ತಿಂಗಳುಗಳ ಹಿಂದೆ ಪ್ರಭಾಸ್ ಅಭಿನಯದಲ್ಲಿ ‘ಸಲಾರ್ 2’ ಸೇರಿದಂತೆ ಮೂರು ಚಿತ್ರಗಳನ್ನು ನಿರ್ಮಿಸುವುದಾಗಿ ಘೋಷಿಸಿತ್ತು. ಇದೀಗ ಬಾಲಿವುಡ್ ನಟ ಹೃತಿಕ್ ರೋಶನ್ ಅಭಿನಯದಲ್ಲಿ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಘೋಷಿಸಿದೆ.
ಈ ಸಂಬಂಧ, ಬುಧವಾರ ಸೋಷಿಯಲ್ ಮೀಡಿಯಾದಲ್ಲಿ ಹೃತಿಕ್ ರೋಶನ್ ಅಭಿನಯದಲ್ಲಿ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಹೊಂಬಾಳೆ ಫಿಲಂಸ್ ಘೋಷಿಸಿದೆ.
ಈ ಹಿಂದೆ ಪ್ಯಾನ್ ಇಂಡಿಯಾ ಚಿತ್ರಗಳನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದೆಯಾದರೂ, ಪೂರ್ಣಪ್ರಮಾಣದಲ್ಲಿ ಹಿಂದಿ ಚಿತ್ರವೊಂದನ್ನು ನಿರ್ಮಿಸಿರಲಿಲ್ಲ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್, ಹಿಂದಿ ಚಿತ್ರರಂಗಕ್ಕೂ ಎಂಟ್ರಿ ಕೊಡುತ್ತದೆ ಎಂಬ ಸುದ್ದಿಗಳು ಕೇಳಿಬರುತ್ತಲೇ ಇದ್ದವು. ಅದು ಹೃತಿಕ್ ರೋಶನ್ ಚಿತ್ರದ ಮೂಲಕ ನಿಜವಾಗಿದೆ.
ಈ ಚಿತ್ರ ಯಾವಾಗ ಪ್ರಾರಂಭವಾಗುತ್ತದೆ, ಯಾರು ನಿರ್ದೇಶನ ಮಾಡುತ್ತಾರೆ, ಯಾವ ತರಹದ ಚಿತ್ರ ಇದಾಗಲಿದೆ, ಯಾರೆಲ್ಲಾ ಇರುತ್ತಾರೆ ಎಂಬ ವಿಷಯಗಳ ಬಗ್ಗೆ ಹೊಂಬಾಳೆ ಫಿಲಂಸ್ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಹೃತಿಕ್ ರೋಶನ್ ಅಭಿನಯದ ‘ವಾರ್ 2’ ಚಿತ್ರವು ಆಗಸ್ಟ್ 15ರಂದು ಬಿಡುಗಡೆಯಾಗಿದ್ದು, ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರದ ಹಾಡೊಂದರ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಈ ಹಾಡಿನಲ್ಲಿ ಹೃತಿಕ್ ರೋಶನ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಇಬ್ಬರೂ ನೃತ್ಯ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಾಡಿನ ಚಿತ್ರೀಕರಣ ಸದ್ಯದಲ್ಲೇ ನಡೆಯಲಿದೆ.
ಸದ್ಯ, ಹೊಂಬಾಳೆ ಫಿಲಂಸ್ ಸಂಸ್ಥೆಯು ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಅಧ್ಯಾಯ 1’ರ ಚಿತ್ರವನ್ನು ನಿರ್ಮಿಸುತ್ತಿದ್ದು, ಅಕ್ಟೋಬರ್.02ರಂದು ಈ ಚಿತ್ರ ಬಿಡುಡೆಯಾಗುತ್ತಿದೆ.





