ಟಾಲಿವುಡ್ ನಟ ಅಲ್ಲು ಅರ್ಜುನ್ ಜೀವನದಲ್ಲಿ, ಕಳೆದೊಂದು ವಾರದಲ್ಲಿ ಏನೆಲ್ಲಾ ಆಗಿ ಹೋಯ್ತು. ಕಳೆದ ವಾರವಷ್ಟೇ ‘ಪುಷ್ಪ 2’ ಚಿತ್ರ ಬಿಡುಗಡೆಯಾಯ್ತು. ಚಿತ್ರವು ಒಂದು ವಾರದಲ್ಲಿ ಸಾವಿರ ಕೋಟಿ ರೂ. ಗಳಿಕೆ ಮಾಡಿ, ಹೊಸ ದಾಖಲೆಯನ್ನೇ ನಿರ್ಮಿಸಿತು. ಅದಾಗುತ್ತಿದ್ದಂತೆಯೇ, ಚಿತ್ರದ ಬಿಡುಗಡೆ ಸಮಾರಂಭದಲ್ಲಿ ನಡೆದು ಒಂದು ದುರ್ಘಟನೆಯಿಂದ ಅರ್ಜುನ್, ಒಂದು ರಾತ್ರಿ ಜೈಲಿನಲ್ಲಿ ಕಳೆಯುವಂತಾಯಿತು.
ಅಲ್ಲು ಅರ್ಜುನ್, ಶುಕ್ರವಾರ ಅರೆಸ್ಟ್ ಆಗುವುದಕ್ಕಿಂತ ಮೊದಲು ಗುರುವಾರ, ನವದೆಹಲಿಯಲ್ಲಿ ನಡೆದು ‘ಪುಷ್ಪ 2’ ಚಿತ್ರದ ಯಶಸ್ಸಿನ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿರುವ ಅಲ್ಲು ಅರ್ಜುನ್, ಇದು ಬರೀ ತಂಡದ ಯಶಸ್ಸಲ್ಲ, ದೇಶದ ಯಶಸ್ಸು ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ಇದು ಬರೀ ನನ್ನ ಯಶಸ್ಸಲ್ಲ. ಇದು ನಮ್ಮ ದೇಶದ ಯಶಸ್ಸು. ಈ ಸಾವಿರ ಕೋಟಿ ಗಳಿಕೆ ಎನ್ನುವುದು ಜನರ ಪ್ರೀತಿಯ ಪ್ರತಿಬಿಂಬ. ಈ ಸಂಖ್ಯೆಗಳೆಲ್ಲಾ ತಾತ್ಕಾಲಿಕ. ಜನರ ಪ್ರೀತಿ ಬಹಳ ಮುಖ್ಯ. ದಾಖಲೆಗಳಿರುವುದೇ ಮುರಿಯುವುದಕ್ಕೆ. ಮುಂದಿನ ಎರಡ್ಮೂರು ತಿಂಗಳು, ಈ ದಾಖಲೆಗಳನ್ನು ನೋಡಿ ಖುಷಿಪಡುತ್ತೇನೆ. 2025ರ ಬೇಸಿಗೆಯ ಹೊತ್ತಿಗೆ, ಈ ದಾಖಲೆಗಳನ್ನು ಬೇರೊಂದು ಚಿತ್ರ ಮುರಿಯಬೇಕು ಎಂಬುದು ನನ್ನಾಸೆ’ ಎಂದರು.
ಇದು ಹೊಸ ಭಾರತ, ನಿಲ್ಲುವುದಿಲ್ಲ, ತಲೆ ಬಗಿಸುವುದಿಲ್ಲ ಎಂದಿರುವ ಅರ್ಜುನ್, ‘ಒಂದು ಭಾಷೆಯ ಚಿತ್ರವು ಹಲವು ರಾಜ್ಯಗಳಲ್ಲಿ ಯಶಸ್ವಿಯಾಗಿವೆ. ಇದು ಈ ದೇಶದಲ್ಲಿ ಜನ ಸಿನಿಮಾವನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಒಂದು ಸಣ್ಣ ಉದಾಹರಣೆ. ಮುಂದೊಂದು ದಿನ ಭಾರತವು ಜಗತ್ತಿನ ಭವಿಷ್ಯವನ್ನು ನಿರ್ಧರಿಸುತ್ತದೆ. ಭಾರತವು ಜಗತ್ತಿನ ಮುಂಚೂಣಿಯಲ್ಲಿರುವ ದೇಶವಾಗುತ್ತದೆ. ಇದು ಹೊಸ ಭಾರತ, ನಿಲ್ಲುವುದಿಲ್ಲ, ತಲೆ ಬಗಿಸುವುದಿಲ್ಲ’ ಎಂದು ಹೇಳಿದ್ದಾರೆ.
ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ಈ ಚಿತ್ರಕ್ಕೆ ಸುಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಜಗಪತಿ ಬಾಬು, ತಾರಕ್ ಪೊನ್ನಪ್ಪ, ರಾವ್ ರಮೇಶ್, ಫಹಾದ್ ಫಾಸಿಲ್, ಸುನೀಲ್, ಅನುಸೂಯ ಭಾರದ್ವಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.




