Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಪ್ಯಾನ್‍ ಇಂಡಿಯಾ ಅಲ್ಲ, ಇನ್ಮುಂದೆ ತೆಲುಗು ಇಂಡಿಯಾ

ಇತ್ತೀಚಿನ ವರ್ಷಗಳಲ್ಲಿ ತೆಲುಗು ಹೀರೋಗಳು ರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯುತ್ತಿದ್ದಾರೆ. ಪ್ರಭಾಸ್‍, ರಾಮ್‍ಚರಣ್‍ ತೇಜ, ಜ್ಯೂನಿಯರ್‍ ಎನ್‍.ಟಿ.ಆರ್‍ ಮುಂತಾದ ತೆಲುಗು ನಟರು ದೊಡ್ಡ ಮಟ್ಟದಲ್ಲಿ ಪ್ಯಾನ್‍ ಇಂಡಿಯಾದ ಮಟ್ಟದಲ್ಲಿ ಗಮನಸೆಳೆದಿದ್ದಾರೆ. ಈಗ ‘ಪುಷ್ಪ 2’ ಚಿತ್ರದ ಯಶಸ್ಸಿನಿಂದ ತೆಲುಗು ನಟರ ಚಿತ್ರಗಳಿಗೆ ಇಡೀ ದೇಶವಷ್ಟೇ ಅಲ್ಲ, ಬೇರೆ ದೇಶಗಳಲ್ಲೂ ಸಾಕಷ್ಟು ಡಿಮ್ಯಾಂಡ್‍ ಇದೆ. ‘ಹಾಗಾಗಿ ಇನ್ನು ಮುಂದೆ ಪ್ಯಾನ್‍ ಇಂಡಿಯಾ ಇಲ್ಲ. ತೆಲುಗು ಇಂಡಿಯಾ’ ಎಂದು ಕರೆಯುವುದು ಸೂಕ್ತ ಎಂದು ನಿರ್ದೇಶಕ ರಾಮ್‍ ಗೋಪಾಲ್‍ ವರ್ಮ ಹೇಳಿದ್ದಾರೆ.

ವರ್ಮ ತಮ್ಮ ಟ್ವೀಟ್‍ಗಳಿಗೆ ಬಹಳ ಜನಪ್ರಿಯರು. ಮನಸ್ಸಿನಲ್ಲಿದ್ದುದನ್ನು ಯಾವುದೇ ಮುಚ್ಚುಮರೆ ಇಲ್ಲದೆ ನೇರವಾಗಿ ಟ್ವೀಟ್‍ ಮಾಡುತ್ತಾ ಬಂದಿದ್ದಾರೆ. ಅದೇ ಕಾರಣಕ್ಕೆ ಸಾಕಷ್ಟು ಟೀಕೆಗಳನ್ನು ಅವರು ಎದುರಿಸಿದ್ದಾರೆ. ಈಗ ಅವರು ತೆಲುಗು ನಟರು ಹೇಗೆ ಇಡೀ ದೇಶದಲ್ಲಿ ತಮ್ಮ ಚಿತ್ರಗಳಿಂದ ಮಿಂಚುತ್ತಿದ್ದಾರೆ ಎಂಬುದನ್ನು ಅವರು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಅಲ್ಲು ಅರ್ಜುನ್‍ ಅಭಿನಯದ ಪ್ಯಾನ್‍ ಇಂಡಿಯಾ ಚಿತ್ರ ‘ಪುಷ್ಪ 2’ ಬಿಡುಗಡೆಯಾಗಿ, ಭಾರತದ ಹಿಂದಿನ ಎಲ್ಲಾ ಬಾಕ್ಸ್ ಆಫೀಸ್‍ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಬಾಲಿವುಡ್ ಚಿತ್ರ ಶಾರೂಖ್ ಖಾನ್‍ ಅಭಿನಯದ ‘ಜವಾನ್‍’ ಆಗಿತ್ತು. ಆ ದಾಖಲೆಯನ್ನು ‘ಪುಷ್ಪ 2’ ಇದೀಗ ಮುರಿದು ಹಾಕಿದೆ. ಚಿತ್ರವು ಮೊದಲ ನಾಲ್ಕು ದಿನಗಳಲ್ಲಿ ಜಗತ್ತಿನಾದ್ಯಂತ 800 ಕೋಟಿ ರೂ. ಸಂಪಾದಿಸಿದೆ.

ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿರುವ ವರ್ಮ, ‘ಬಾಲಿವುಡ್‍ ಇತಿಹಾಸದಲ್ಲಿ ಅತ್ಯಂತ ಗಳಿಕೆ ಮಾಡಿದ ಸಿನಿಮಾ ಎಂದರೆ ಅದು ತೆಲುಗಿನಿಂದ ಡಬ್‍ ಆದ ‘ಪುಷ್ಪ 2’. ಬಾಲಿವುಡ್‍ ಇತಿಹಾಸದಲ್ಲಿ ಅತ್ಯಂತ ದೊಡ್ಡ ಹೀರೋ ಎಂದರೆ, ಅದು ಹಿಂದಿ ಮಾತನಾಡಲು ಬರದ ತೆಲುಗು ನಟ ನಟ ಅಲ್ಲು ಅರ್ಜುನ್‍. ಹಾಗಾಗಿ, ಇನ್ನು ಮುಂದೆ ಪ್ಯಾನ್‍ ಇಂಡಿಯಾ ಇಲ್ಲ. ತೆಲುಗು ಇಂಡಿಯಾ’ ಎಂದು ಬರೆದುಕೊಂಡಿದ್ದಾರೆ.

ರಾಮ್ ಗೋಪಾಲ್‍ ವರ್ಮ ಅವರ ಟ್ವೀಟ್‍ಗೆ ನೆಟ್ಟಿಗರಿಂದ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Tags: