Mysore
15
clear sky

Social Media

ಬುಧವಾರ, 24 ಡಿಸೆಂಬರ್ 2025
Light
Dark

ಚಿತ್ರೀಕರಣ ಸ್ಥಳದಲ್ಲಿ ಕಪಿಲ್‍ ಸಾವು ಸಂಭವಿಸಿಲ್ಲ; ಹೊಂಬಾಳೆ ಫಿಲಂಸ್ ಸ್ಪಷ್ಟನೆ

ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಚಾಪ್ಟರ್ 1’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಎಂ.ಎಫ್‍. ಕಪಿಲ್‍ ಎಂಬ ಜ್ಯೂನಿಯರ್ ಕಲಾವಿದ ನಿಧನರಾಗಿದ್ದರು ಎಂಬ ಸುದ್ದಿಯೊಂದು ಕೇಳಿ ಬಂದಿತ್ತು. ಆದರೆ, ಈ ಘಟನೆ ‘ಕಾಂತಾರ’ ಚಿತ್ರೀಕರಣದ ಸ್ಥಳದಲ್ಲಿ ಸಂಭವಿಸಿಲ್ಲ ಎಂದು ಹೊಂಬಾಳೆ ಫಿಲಂಸ್‍ ಸ್ಪಷ್ಟಪಡಿಸಿದೆ.

ಕರ್ನಾಟಕದ ಕೊಲ್ಲೂರು ಬಳಿಯ ಸೌಪರ್ಣಿಕಾ ನದಿಯಲ್ಲಿ ಮೇ 6ರಂದು ಸಂಜೆ 4ರ ಹೊತ್ತಿಗೆ ಕೇರಳದ ವೈಕಂನ ಮೂಸರಿತರ ನಿವಾಸಿಯಾದ ಎಂ.ಎಫ್‍. ಕಪಿಲ್‍ ಎಂಬುವವರು ಮೃತಪಟ್ಟಿದ್ದರು. ಅವರಿಗೆ 33 ವರ್ಷ ವಯಸ್ಸಾಗಿತ್ತು. ಕಪಿಲ್‍ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ (AICWA) ಆಗ್ರಹಿಸಿತ್ತು.

ಈ ಸಂಬಂಧ ಚಿತ್ರವನ್ನು ನಿರ್ಮಿಸುತ್ತಿರುವ ಹೊಂಬಾಳೆ ಫಿಲಂಸ್‍ ಸಂಸ್ಥೆಯು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕಪಿಲ್‍ ಅವರ ಸಾವು ಚಿತ್ರೀಕರಣದ ಸಮಯದಲ್ಲಿ ಆಗಿಲ್ಲ, ಅದರ ಹೊರಗೆ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದೆ.

ಪತ್ರಿಕಾ ಪ್ರಕಟಣೆಯಲ್ಲಿಎಂ.ಎಫ್. ಕಪಿಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಹೊಂಬಾಳೆ ಫಿಲಂಸ್‍, ‘ಈ ಘಟನೆ ‘ಕಾಂತಾರ’ ಚಿತ್ರೀಕರಣದ ಸ್ಥಳದಲ್ಲಿ ಸಂಭವಿಸಿಲ್ಲ. ಆ ದಿನ ಯಾವುದೇ ಚಿತ್ರೀಕರಣ ನಿಗದಿಯಾಗಿರಲಿಲ್ಲ ಮತ್ತು ಈ ಘಟನೆ ಅವರ ವೈಯಕ್ತಿಕ ಕಾರ್ಯಕ್ರಮದಲ್ಲಿ, ಚಲನಚಿತ್ರ ಸಂಬಂಧಿತ ಚಟುವಣಕೆಗಳ ವ್ಯಾಪ್ತಿಯ ಹೊರಗೆ ಸಂಭವಿಸಿದೆ. ಈ ಘಟನೆಯನ್ನು ‘ಕಾಂತಾರ’ ಚಿತ್ರ ಅಥವಾ ಅದರ ಸಿಬ್ಬಂದಿಯೊಂದಿಗೆ ಯಾವುದೇ ಸಂಬಂಧವನ್ನು ಕಲ್ಪಿಸಬಾರದು ಎಂದು ನಾವು ವಿನಂತಿಸುತ್ತೇವೆ’ ಎಂದು ಹೊಂಬಾಳೆ ಫಿಲಂಸ್‍ ಮನವಿ ಮಾಡಿದೆ.

‘ಕಾಂತಾರ – ಅಧ್ಯಾಯ 1’ ಚಿತ್ರವು ಏಳೆಂಟು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಹೊಂಬಾಳೆ ಫಿಲಂಸ್‍ನ ವಿಜಯ್‍ ಕಿರಗಂದೂರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅರವಿಂದ್‍ ಕಶ್ಯಪ್‍ ಛಾಯಾಗ್ರಹಣ ಮತ್ತು ಅಜನೀಶ್ ‍ಲೋಕನಾಥ್‍ ಸಂಗೀತವಿದೆ. ಚಿತ್ರವು ಅಕ್ಟೋಬರ್ 02ರಂದು ಬಹುಭಾಷೆಗಳಲ್ಲಿ ಪ್ಯಾನ್‍ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ.

Tags:
error: Content is protected !!