Mysore
21
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಸಿತಾರೆ ಜಮೀನ್‍ ಪರ್’ ಓಟಿಟಿ ಹಕ್ಕುಗಳಿಗೆ ನೆಟ್‍ಫ್ಲಿಕ್ಸ್ 125 ಕೋಟಿ ರೂ. ಆಫರ್

Sitaare Zameen Par

ಆಮೀರ್ ಖಾನ್‍ ಅಭಿನಯದ ‘ಸಿತಾರೆ ಜಮೀನ್‍ ಪರ್’ ಚಿತ್ರವು ಜೂನ್‍.20ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಚಿತ್ರದ ಡಿಜಿಟಲ್‍ ಹಕ್ಕುಗಳಿಗೆ ಭಾರೀ ಬೇಡಿಕೆ ಬಂದಿದ್ದು, ಹಕ್ಕುಗಳನ್ನು ಪಡೆಯುವುದಕ್ಕೆ ನೆಟ್‍ಫ್ಲಿಕ್ಸ್ 125 ಕೋಟಿ ರೂ. ಆಫರ್ ನೀಡಿದೆ ಎಂದು ಹೇಳಲಾಗುತ್ತಿದೆ.

ಚಿತ್ರದ ಡಿಜಿಟಲ್‍ ಹಕ್ಕುಗಳಿಗೆ ಓಟಿಟಿ ವೇದಿಕೆಗಳು ದೊಡ್ಡ ಮಟ್ಟದ ಹಣ ಕೊಡುವುದು ಹೊಸದೇನಲ್ಲ. ‘ಪುಷ್ಪಾ 2’ ಚಿತ್ರದ ಹಕ್ಕುಗಳಿಗೆ ನೆಟ್‍ಫ್ಲಿಕ್ಸ್, 270 ಕೋಟಿ ರೂ ನೀಡಿದ್ದು ಸುದ್ದಿಯಾಗಿತ್ತು. ‘ಪುಷ್ಪಾ 2’ಗೆ ಹೋಲಿಸಿದರೆ, ‘ಸಿತಾರೆ ಜಮೀನ್‍ ಪರ್’ ಚಿತ್ರದ ಹಕ್ಕುಗಳನ್ನು ಖರೀದಿಸುವುದಕ್ಕೆ 125 ಕೋಟಿ ರೂ ಖರ್ಚು ಮಾಡುತ್ತಿರುವುದು ದೊಡ್ಡ ವಿಷಯವೇನಲ್ಲ.

ಇದಕ್ಕೂ ಮೊದಲು ಯಾವುದೋ ಓಟಿಟಿಗೆ ಡಿಜಿಟಲ್‍ ಹಕ್ಕುಗಳನ್ನು ಕೊಡುವ ಬದಲು ಯಾಕೆ ತಮ್ಮದೇ ಯೂಟ್ಯೂಬ್‍ ಚಾನಲ್‍ನಲ್ಲಿ Pay-Per-View ಮಾದರಿಯಲ್ಲಿ ಬಿಡುಗಡೆ ಮಾಡುವ ಯೋಚನೆಯನ್ನು ಆಮೀರ್ ಖಾನ್‍ ಮಾಡಿದ್ದರು. ಹಕ್ಕುಗಳಿಗೆ ಒಂದು ನಿರ್ದಿಷ್ಟವಾದ ಮೊತ್ತವನ್ನು ನೀಡಲಾಗುತ್ತದೆ. ಆದರೆ, ತಾವೇ ಚಿತ್ರವನ್ನು ಯೂಟ್ಯೂಬ್‍ ಮೂಲಕ ಬಿಡುಗಡೆ ಮಾಡಿದರೆ, ಆಗ ಹಕ್ಕುಗಳು ಸಹ ಜೊತೆಗಿರುತ್ತದೆ ಮತ್ತು ಜಾಸ್ತಿ ದುಡಿಯುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ, ಚಿತ್ರವನ್ನು ತಮ್ಮದೇ ಯೂಟ್ಯೂಬ್‍ ಚಾನಲ್‍ನಲ್ಲಿ ಬಿಡುಗಡೆ ಮಾಡುವುದಕ್ಕೆ ಆಮೀರ್ ಖಾನ್‍ ಯೋಚಿಸಿದ್ದರಂತೆ.

ಹಾಗಾಗಿಯೇ, ಮೊದಲು ಚಿತ್ರದ ಹಕ್ಕುಗಳನ್ನು ಖರೀದಿಸುವುದಕ್ಕೆ 60 ಕೋಟಿ ಎತ್ತಿಟ್ಟಿದ್ದ ನೆಟ್‍ಫ್ಲಿಕ್ಸ್, ಯಾವಾಗ ಆಮೀರ್ ಇಂಥದ್ದೊಂದು ನಿರ್ಧಾರಕ್ಕೆ ಬಂದರೋ, ಆಗ ಮೊತ್ತವನ್ನು ಏರಿಸಿದೆ. 60 ಕೋಟಿ ಬದಲು 125 ಕೋಟಿ ರೂ ಕೊಟ್ಟು ಡಿಜಿಟಲ್‍ ಹಕ್ಕುಗಳನ್ನು ಪಡೆಯುವುದಕ್ಕೆ ಮುಂದಾಯಿತಂತೆ. ಅದಕ್ಕೆ ಕಾರಣವೂ ಇದೆ. ಆಮೀರ್ ಖಾನ್‍ ಅವರ ಈ ನಡೆಯಿಂದ ಮುಂದೆ ಓಟಿಟಿ ವೇದಿಕೆಗಳಿಗೆ ದೊಡ್ಡ ಅಪಾಯ ಬರುವ ಸಾಧ್ಯತೆ ಇದೆ. ಹೇಗೆಂದರೆ, ಮುಂದಿನ ದಿನಗಳಲ್ಲಿ ಎಲ್ಲರೂ ಓಟಿಟಿ ಬಿಟ್ಟು, ತಮ್ಮದೇ ಯೂಟ್ಯೂಬ್‍ ಚಾನಲ್‍ನಲ್ಲಿ Pay-Per-View ಮಾದರಿಯಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಿದರೆ, ಇದರಿಂದ ಇಡೀ ವ್ಯವಸ್ಥೆಗೆ ಪೆಟ್ಟು ಬಿದ್ದಂತಾಗುತ್ತದೆ. ಹಾಗಾಗಿ, ಆಮೀರ್ ಖಾನ್‍ರನ್ನು ತಡೆಯುವುದಕ್ಕೆ ದುಪ್ಪಟ್ಟ ಆಫರ್ ನೀಡಲಾಗಿದೆ ಎಂದು ಹೇಳಲಾಗಿದೆ.

‘ಸಿತಾರೆ ಜಮೀನ್‍ ಪರ್’ ಚಿತ್ರವು ‘ಚಾಂಪಿಯನ್ಸ್’ ಎಂಬ ಸ್ಪಾನಿಶ್‍ ಚಿತ್ರದ ರೀಮೇಕ್‍ ಆಗಿದ್ದು, ಈ ಚಿತ್ರದಲ್ಲಿ ಆಮೀರ್ ಖಾನ್‍ ಜೊತೆಗೆ ಜೆನಿಲಿಯಾ ಡಿಸೋಜ ಮುಂತಾದವರು ನಟಿಸಿದ್ದಾರೆ. ಚಿತ್ರವನ್ನು ಆರ್.ಎಸ್.ಪ್ರಸನ್ನ ನಿರ್ದೇಶಿಸಿದ್ದಾರೆ.

Tags:
error: Content is protected !!