‘ಸಂಜು ವೆಡ್ಸ್ ಗೀತಾ 2’ ಚಿತ್ರವನ್ನು ದಸರಾಗೆ ಬಿಡುಗಡೆ ಮಾಡುವುದಾಗಿ ಹೇಳಿದ್ದರು ನಿರ್ದೇಶಕ ನಾಗಶೇಖರ್. ಈಗ ನೋಡಿದರೆ ಅದು ಸಂಶಯ ಎಂದನಿಸುತ್ತಿದೆ. ಏಕೆಂದರೆ, ಚಿತ್ರದ ಮೊದಲ ಕಾಪಿ ತೆಗೆಯುವುದಕ್ಕೆ ಇನ್ನೊಂದು ತಿಂಗಳಾದರೂ ಬೇಕಂತೆ. ಆ ನಂತರ ಪ್ರಚಾರ ಮಾಡಿ ಚಿತ್ರ ಬಿಡುಗಡೆ ಮಾಡಬೇಕು ಎಂದರೆ ದಸರಾಗಂತೂ ಸಾಧ್ಯವಿಲ್ಲ.
ಸದ್ಯಕ್ಕಂತೂ ನಾಗಶೇಖರ್ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಕೊನೆಯ ದೃಶ್ಯವನ್ನು ಚಿತ್ರೀಕರಿಸುವ ಮೂಲಕ ಚಿತ್ರೀಕರಣವನ್ನು ಮುಗಿಸಲಾಯಿತು. ನಾಯಕಿ ರಚಿತಾ ರಾಮ್ ಪೇಂಟ್ ಮಾಡುತ್ತಿರುವ ದೃಶ್ಯವನ್ನು ನಾಗಶೇಖರ್ ಚಿತ್ರೀಕರಿಸಿಕೊಳ್ಳುವ ಮೂಲಕ, ಚಿತ್ರಕ್ಕೆ ಕುಂಬಳಕಾಯಿ ಒಡೆಯಲಾಯಿತು.
ವಿಶೇಷವೆಂದರೆ, ಶ್ರೀನಗರ ಕಿಟ್ಟಿ ಹಲವು ವರ್ಷಗಳಿಂದ ಬಿಟ್ಟಿದ್ದ ಗಡ್ಡಕ್ಕೆ ಕತ್ತರಿ ಹಾಕಿಸಿದ್ದಾರೆ. ‘ಸಂಜು ವೆಡ್ಸ್ ಗೀತಾ 2’ ಆರಂಭದಲ್ಲಿ ಉದ್ದ ಗಡ್ಡದೊಂದಿಗೆ ಕಾಣಿಸಿಕೊಂಡಿದ್ದ ಕಿಟ್ಟಿ, ಚಿತ್ರ ಮುಗಿಯುವ ಹೊತ್ತಿಗೆ ಟ್ರಿಮ್ ಮಾಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘ಗಡ್ಡ ಕತ್ತರಿಸಿದ್ದಿಕ್ಕೆ ಮನೆಯಲ್ಲಿ ಖುಷಿಯಾಗಿದ್ದಾರೆ. ಚಿತ್ರದಲ್ಲಿ ದೊಡ್ಡ ಕಥೆ ಇದೆ. ಇದು ‘ಸಂಜು ವೆಡ್ಸ್ ಗೀತಾ’ದ ಮುಂದುವರೆದ ಭಾಗವೋ ಅಲ್ಲವೋ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಆ ಚಿತ್ರದಲ್ಲಿ ಕೆಲಸ ಮಾಡಿದ್ದ ಸಾಕಷ್ಟು ಮಂದಿ ಈ ಚಿತ್ರದಲ್ಲಿ ಕೆಲಸ ಮಾಡಿರುವುದು ವಿಶೇಷ. ಇಲ್ಲಿ ಹಲವು ವಿಷಯಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ನಾಗಶೇಖರ್ ಬಹಳ ಅಪ್‍ಡೇಟ್ ಆಗಿ ಚಿತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ನನ್ನ ರಚಿತಾ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ. ನಾಗಶೇಖರ್ ತಮ್ಮ ಚಿತ್ರಗಳಲ್ಲಿ ನಾಯಕಿಯರನ್ನ ಮುಟ್ಟೋದಕ್ಕೆ ಬಿಡಲ್ಲ. ಈ ಚಿತ್ರದಲ್ಲೂ ನಾನು ನಾಯಕಿಯನ್ನು ಮುಟ್ಟಿಲ್ಲ. ‘ಸಂಜು ವೆಡ್ಸ್ ಗೀತಾ’ಗಿಂತ ಈ ಹಾಡುಗಳು ಹಿಟ್ ಆಗುತ್ತವೆ ಎಂಬ ವಿಶ್ವಾಸ ನನಗಿದೆ’ ಎಂದರು.
ನಿರ್ದೇಶಕ ನಾಗಶೇಖರ್ ಮಾತನಾಡಿ, ‘ನಮ್ಮ ಚಿತ್ರ ವರ್ಷದ ಹಿಂದೆ ಶುರುವಾಗಿತ್ತು. ಶಿಡ್ಲಘಟ್ಟ, ಸ್ವಿಟ್ಜರ್ ಲ್ಯಾಂಡ್, ಬೆಂಗಳೂರು ಸುತ್ತಮುತ್ತ ಓಟ್ಟು 72 ದಿನಗಳ ಕಾಲ, ಆರು ಹಂತಗಳಲ್ಲಿ ಚಿತ್ರೀಕರಣ ಮುಗಿಸಿದ್ದೇವೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಜೊತೆಯಾಗಿಯೇ ಸಾಗಿದ್ದು, ಸದ್ಯದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇನ್ನೊಂದು ತಿಂಗಳಲ್ಲಿ ಚಿತ್ರದ ಮೊದಲ ಕಾಪಿ ಬರುತ್ತದೆ. ಆ ನಂತರ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತೇವೆ’ ಎಂದರು.
ನಾಯಕಿ ರಚಿತಾ ರಾಮ್, ಸ್ವಿಟ್ಜರ್‍ಲ್ಯಾಂಡ್ ಚಿತ್ರೀಕರಣದ ಬಗ್ಗೆ ಹೆಚ್ಚು ಮಾತನಾಡಿದರು. ‘ಸ್ವಿಟ್ಜರ್ ಲ್ಯಾಂಡ್ ಶೂಟಿಂಗ್ ಸಮಯದಲ್ಲಿ ನಮಗಾದ ಅನುಭವ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ. ಅದಕ್ಕೆ ಸತ್ಯ ಹೆಗಡೆ ಅವರೇ ಕಾರಣ. ಮುಖ್ಯವಾಗಿ ನಾವು ಹೋದಲ್ಲೆಲ್ಲ ವಾತಾವರಣ ನಮಗೆ ಸಹಕಾರಿಯಾಗಿತ್ತು’ ಎಂದರು.
ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ರೇಶ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ ನಮ್ಮ ಮಣ್ಣಿನ ಪ್ರೇಮಿಗಳ ಕಥೆಯನ್ನು ಹೇಳುವುದಕ್ಕೆ ಹೊರಟಿದ್‍ದಾರೆ. ಚಿತ್ರದಲ್ಲಿ ಕಿಟ್ಟಿ ಮತ್ತು ರಚಿತಾ ಜೊತೆಗೆ ಚೇತನ್ ಚಂದ್ರ, ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ರಂಗಾಯಣ ರಘು, ತಬಲ ನಾಣಿ, ಮೂಗು ಸುರೇಶ್, ಸಾಧು ಕೋಕಿಲ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ, ಶ್ರೀಧರ್ ಸಂಭ್ರಮ್ ಸಂಗೀತವಿದೆ.