Mysore
24
scattered clouds

Social Media

ಬುಧವಾರ, 15 ಜನವರಿ 2025
Light
Dark

ಒಂದೇ ಚಿತ್ರದಲ್ಲಿ, ಏಳು ಅವತಾರಗಳಲ್ಲಿ ನಭಾ ನಟೇಶ್‍

ಕನ್ನಡತಿ ನಭಾ ನಟೇಶ್‍, ತೆಲುಗು ಚಿತ್ರರಂಗಕ್ಕೆ ಹೋಗಿ ಯಾವ ಕಾಲವಾಯ್ತೋ ನೆನಪಿಟ್ಟುಕೊಂಡವರಿಲ್ಲ. ಶಿವರಾಜಕುಮಾರ್‍ ಅಭಿನಯದ ‘ವಜ್ರಕಾಯ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ನಭಾ ನಟೇಶ್‍, ಕನ್ನಡದಲ್ಲಿ ಮೂರು ಚಿತ್ರಗಳಲ್ಲಿ ನಟಿಸಿ ತೆಲುಗಿನತ್ತ ಹೊರಟರು. ಅಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದರು. ಈಗ ನಭಾ ಅಭಿನಯದ ಚಿತ್ರವೊಂದು ಮೂರು ವರ್ಷಗಳ ನಂತರ ಬಿಡುಗಡೆಯಾಗಿದೆ.

ಹೌದು, ತೆಲುಗಿನಲ್ಲಿ ಬ್ಯುಸಿಯಾಗಿದ್ದ ನಭಾ ಅಭಿನಯದ ಯಾವೊಂದು ಚಿತ್ರ ಸಹ ಕಳೆದ ಮೂರು ವರ್ಷಗಳಿಂದ ಬಿಡುಗಡೆಯಾಗಿರಲಿಲ್ಲ. ಅದಕ್ಕೆ ಕಾರಣ, ನಭಾ ಯಾವೊಂದು ಚಿತ್ರದಲ್ಲೂ ನಟಿಸಿರಲಿಲ್ಲ. ಮೂರು ವರ್ಷಗಳ ಹಿಂದೆ ಬಿಡುಗಡೆಯಾದ ‘ಮೇಸ್ಟ್ರೋ’ ಚಿತ್ರವೇ ಕೊನೆ, ಆ ನಂತರ ನಭಾ ಅಭಿನಯದ ಯಾವ ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಕಾರಣ, ನಭಾಗೆ ಎಡಭುಜದಲ್ಲಿ ಪೆಟ್ಟಾಗಿತ್ತು. ಅವರಿಗೆ ಸರ್ಜರಿ ಸಹ ಆಗಿತ್ತು. ಆ ನಂತರ ಸುಮಾರು ಒಂದೂವರೆ ವರ್ಷಗಳ ಕಾಲ ನಭಾ ಯಾವೊಂದು ಚಿತ್ರದಲ್ಲೂ ನಟಿಸಿರಲಿಲ್ಲ.

ಕಳೆದ ವರ್ಷ ಕ್ರಮೇಣ ಚೇತರಿಸಿಕೊಂಡ ನಭಾ, ನಟಿಸುವುದನ್ನು ಮುಂದುವರೆಸಿದರು. ಅಪಘಾತದ ನಂತರ ಅವರು ನಟಿಸಿದ ಮೊದಲ ಚಿತ್ರ ‘ಡಾರ್ಲಿಂಗ್’ ಕಳೆದ ವಾರ ಆಂಧ್ರ ಮತ್ತು ತೆಲಂಗಾಣದಲ್ಲಿ ಬಿಡುಗಡೆಯಾಗಿದೆ. ‘ಡಾರ್ಲಿಂಗ್’ ಹೆಸರಿನ ಈ ಚಿತ್ರದಲ್ಲಿ ಪ್ರಿಯದರ್ಶಿನಿ ಪುಲಿಕೊಂಡಗೆ ನಭಾ ನಾಯಕಿಯಾಗಿ ನಟಿಸಿದ್ದಾರೆ. ವಿಶೇಷವೆಂದರೆ, ಇದು ಒಂದೇ ಪಾತ್ರವಾದರೂ, ಏಳು ಅವತಾರಗಳಲ್ಲಿ ನಭಾ ಕಾಣಿಸಿಕೊಂಡಿದ್ದಾರೆ. ಮಲ್ಟಿಪಲ್‍ ಪರ್ಸನಾಲಿಟಿ ಡಿಸಾರ್ಡರ್ ಸಮಸ್ಯೆ ಇರುವ ನಾಯಕಿಯಾಗಿ ನಭಾ ನಟಿಸಿದ್ದು, ಏಳು ವಿಭಿನ್ನ ಶೈಲಿಯಲ್ಲಿ ನಟಿಸಿದ್ದಾರೆ. ನಭಾ ನಟನೆಗೆ ಇದೀಗ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಂದಹಾಗೆ, ಇದಲ್ಲೆ ‘ಸ್ವಯಂಭು’ ಎಂಬ ಇನ್ನೊಂದು ಚಿತ್ರದಲ್ಲೂ ನಭಾ ನಟಿಸುತ್ತಿದ್ದಾರೆ. ‘ಕಾರ್ತಿಕೇಯ’ ಖ್ಯಾರಿಯ ನಿಖಿಲ್‍ ಸಿದ್ಧಾರ್ಥ್‍ ಅಭಿನಯದ ಈ ಚಿತ್ರವು ಪ್ಯಾನ್‍ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಚಿತ್ರವಷ್ಟೇ ಅಲ್ಲ, ನಿಖಿಲ್‍ ವೃತ್ತಿಜೀವನದಲ್ಲೇ ಅತ್ಯಮತ ದೊಡ್ಡ ಬಜೆಟ್‍ನ ಚಿತ್ರವಾಗಿದೆ. ಇದಲ್ಲದೆ, ಇನ್ನೊಂದಿಷ್ಟು ಚಿತ್ರಗಳಲ್ಲಿ ನಭಾ ಹೆಸರು ಕೇಳಿಬರುತ್ತಿದ್ದು, ಕನ್ನಡಕ್ಕಿಂತ ತೆಲುಗಿನಲ್ಲೇ ಹೆಚ್ಚು ಬ್ಯುಸಿಯಾಗಿದ್ದಾರೆ ನಭಾ.

Tags: