ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ದೊಡ್ಮನೆ ಸೊಸೆ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅವರು ಗೆದ್ದೇ ಗೆಲ್ಲುತ್ತೇನೆ ಎಂದು ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.
ಈವರೆಗೆ ದೊಡ್ಮನೆಗೂ ರಾಜಕೀಯಕ್ಕೂ ಆಗುವುದಿಲ್ಲ ಎಂದು ಎಲ್ಲರಿಗೂ ಗೊತ್ತಿತ್ತು. ಆದರೆ ತಮ್ಮ ಹೆಂಡತಿ ಪರ ಪ್ರಚಾರ ಮಾಡುತ್ತಿರುವ ಶಿವಣ್ಣ, ದೊಡ್ಮನೆ ರಾಜಕೀಯಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.
ಅಪ್ಪಾಜಿಗೆ ರಾಜಕೀಯ ಆಗುತ್ತಿರಲಿಲ್ಲ ಅಂತ ಕೆಲವರು ಹೇಳ್ತಾರೆ. ಹಾಗೇನೂ ಇಲ್ಲ. ಯಾವುದೇ ಸಮಾರಂಭ ಆಗಲಿ, ಯಾವುದೇ ಮುಖ್ಯಮಂತ್ರಿ ಆಗಲಿ, ಮೊದಲು ದೊಡ್ಮನೆಗೆ ಬಂದು ಅಪ್ಪಾಜಿ ಜೊತೆ ಮಾತಾಡುತ್ತಿದ್ದರು. ಅಪ್ಪಾಜಿಗೂ ಪಾಲಿಟಿಕ್ಸ್ ಬೇಕು, ರಾಜಕೀಯದ ವ್ಯಕ್ತಿಗಳು ಬೇಕು. ಇಲ್ಲಾಂದ್ರೆ ನನಗೆ ಯಾಕೆ ಬಂಗಾರಪ್ಪನ ಮಗಳು ತರಬೇಕು ಹೇಳಿ? ಅವರು ರಾಜಕೀಯವನ್ನು ಯಾವಾಗಲೂ ತಪ್ಪು ಅಂತ ಹೇಳಿಲ್ಲ ಎಂದು ಶಿವಣ್ಣ ಹೇಳಿದ್ದಾರೆ.
ಅಪ್ಪಾಜಿಗೆ ವೈಯಕ್ತಿಕವಾಗಿ ರಾಜಕೀಯ ಆಗುತ್ತಿರಲಿಲ್ಲ ಅಷ್ಟೇ. ತಮ್ಮ ಕೆಲಸ ನಟನೆ ಅಂತ ಹೇಳಿದ್ದರು. ಅಪ್ಪಾಜಿ ನನಗೆ ಕೊಟ್ಟ ಬಳುವಳಿಯೇ ಸಿನಿಮಾ. ಹಾಗಾಗಿ ನಾನು ರಾಜಕೀಯ ರಂಗಕ್ಕೆ ಹೋಗಲಿಲ್ಲ. ಆದರೆ ಗೀತಾಗೆ ಹಾಗಲ್ಲ. ಅವರ ತಂದೆಯ ರಕ್ತನೂ ಇದೆ. ಅದೊಂದು ಜವಾಬ್ದಾರಿ ಅವರಿಗೆ ಇದೆ. ಬರೀ ಗಂಡಸರಿಗೆ ಮಾತ್ರ ಜವಾಬ್ದಾರಿ ಇರಬೇಕಾ? ಹೆಣ್ಮಕ್ಕಳಿಗೆ ಇರಬಾರದಾ? ಕರ್ನಾಟಕದ ಮಹಿಳೆಯರು ರಾಜಕೀಯದಲ್ಲಿ ಕಡಿಮೆ ಜನ ಇದ್ದಾರೆ. ಈಗ ಹೆಣ್ಮಕ್ಕಳೇ ಸ್ಟ್ರಾಂಗ್ ಗುರು’ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
ಚಿತ್ರರಂಗದಲ್ಲಿ ಎಲ್ಲರೂ ಸೇರಿ ಕುಟುಂಬ ಆಗುತ್ತದೆ. ಆ ಇಡೀ ಕುಟುಂಬ ಇವತ್ತು ಗೀತಾ ಪರವಾಗಿ ನಿಂತಿದ್ದಕ್ಕೆ ನಮಗೆ ಹೆಮ್ಮೆ ಆಗುತ್ತದೆ. ಇದಕ್ಕೆ ನಾವು ಧನ್ಯ’ ಎಂದು ಶಿವರಾಜ್ಕುಮಾರ್ ಅಭಿನಂದನೆ ಸಲ್ಲಿಸಿದರು.





