Mysore
17
overcast clouds

Social Media

ಮಂಗಳವಾರ, 10 ಫೆಬ್ರವರಿ 2026
Light
Dark

ಜೀವನ ಪಯಣದ ಸುತ್ತ ‘ಕಾವೇರಿ ತೀರದಲ್ಲಿ ಮುಂಗಾರಿದೆ’

ಥ್ರಿಲ್ಲರ್ ಮಂಜು ಅಭಿನಯದ ‘ಮುಗಿಲ ಮಲ್ಲಿಗೆ’ ಚಿತ್ರವನ್ನು ನಿರ್ದೇಶಿಸಿರುವ ಆರ್‍.ಕೆ. ಗಾಂಧಿ, ಇದೀಗ ಸದ್ದಿಲ್ಲದೆ ಇನ್ನೊಂದು ಚಿತ್ರ ಶುರು ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ‘ಮುಗಿಲ ಮಲ್ಲಿಗೆ’ ಚಿತ್ರದ ಬಿಡುಗಡೆಗೂ ಮೊದಲೇ ಈ ಚಿತ್ರ ಪ್ರಾರಂಭವಾಗಲಿದ್ದು, ಚಿತ್ರಕ್ಕೆ ‘ಕಾವೇರಿ ತೀರದಲ್ಲಿ ಮುಂಗಾರಿದೆ’ ಎಂಬ ಹೆಸರು ಇಡಲಾಗಿದೆ.

ಕನ್ನಡದಲ್ಲಿ ಇದಕ್ಕೂ ಮೊದಲು ‘ಕಾವೇರಿ ತೀರದಲ್ಲಿ’ ಎಂಬ ಚಿತ್ರ ಬಿಡುಗಡೆ ಆಗಿತ್ತು. ಇನ್ನು, ‘ಮುಂಗಾರು’ ಹೆಸರಿನ ಕೆಲವು ಚಿತ್ರಗಳು ಬಿಡುಗಡೆಯಾಗಿವೆ. ಈಗ ‘ಕಾವೇರಿ ತೀರದಲ್ಲಿ ಮುಂಗಾರು’ ಎಂಬ ಚಿತ್ರವನ್ನು ಆರ್‍.ಕೆ. ಗಾಂಧಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.

ಮನುಷ್ಯನ ಜೀವನ ಅನ್ನೋದು ಒಂದು ಸಮುದ್ರದ ತೀರದಂತೆ. ಅದು ಕೆಲವೊಮ್ಮೆ ಪ್ರಶಾಂತವಾಗಿ ಸಾಗುತ್ತಿದ್ದರೆ, ಮತ್ತೆ ಕೆಲವೊಮ್ಮೆ ಬೋರ್ಗೆರೆಯುವ ಅಲೆಗಳಿಂದ ಬದುಕನ್ನು ಎದುರಿಸಬೇಕಾಗುತ್ತದೆ. ಯಾವಾಗ ಪ್ರಶಾಂತವಾಗಿ ಸಾಗುತ್ತದೆ, ಯಾವಾಗ ತನ್ನ ದಿಕ್ಕನ್ನು ವಿರುದ್ಧವಾಗಿ ಬದಲಿಸಿಕೊಂಡುಬಿಡುತ್ತದೆ ಅನ್ನೋದನ್ನು ಯಾರಿಂದಲೂ ಸಹ ಊಹಿಸಲು ಸಾಧ್ಯವಾಗುವುದಿಲ್ಲ ಎಂಬ ಎಳೆ ಇಟ್ಟುಕೊಂಡು ‘ಕಾವೇರಿ ತೀರದಲ್ಲಿ ಮುಂಗಾರಿದೆ’ ಕಥೆ ಮಾಡಲಾಗುತ್ತಿದೆ.

ಸ್ನೇಹಾಲಯಂ ಕ್ರಿಯೇಷನ್ಸ್ ಲಾಂಛನದಲ್ಲಿ ನವೀನ್ ಕುಮಾರ್ ಗೌಡ, ಗೋಪಾಲ್ ಸ್ವಾಮಿ, ಹಾಗು ವಸಂತ ನಾಯಕ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಬಾಗಲಕೋಟೆ ಜಿಲ್ಲೆಯ ತೇರದಾಳ ಮೂಲದ ಉದಯ್ ಹಾಗೂ ಕನ್ನಡದಲ್ಲಿ ‘ಮಗಳೇ’, ‘ಅಸುರರು’ ಚಿತ್ರಗಳಲ್ಲಿ ನಟಿಸಿದ್ದ ಸುಪ್ರಿತಾ ರಾಜ್ ಈ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ.

‘ಕಾವೇರಿ ತೀರದಲ್ಲಿ ಮುಂಗಾರಿದೆ’ ಚಿತ್ರಕ್ಕೆ ಗಂಧರ್ವ ರಾಯ್ ರಾವುತ್ ಸಂಗೀತ ಮತ್ತು ನಾಗೇಂದ್ರ ಕುಮಾರ್ ಎಂ ಅವರ ಛಾಯಾಗ್ರಹಣವಿದೆ. ಚಿತ್ರದ ಚಿತ್ರೀಕರಣ ಏಪ್ರಿಲ್ 25 ರಿಂದ ಪ್ರಾರಂಭವಾಗಲಿದ್ದು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಹೊಸಪೇಟೆ, ಬಾಗಲಕೋಟೆ ಹಾಗೂ ಬಿಜಾಪುರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

Tags:
error: Content is protected !!