‘ದುನಿಯಾ’ ವಿಜಯ್ ಮಗಳು ಮೋನಿಕಾ ಈ ವರ್ಷದ ಏಪ್ರಿಲ್‌ನಲ್ಲಿ ಪ್ರಾರಂಭವಾದ ‘ಪ್ರೊಡಕ್ಷನ್ ನಂ 2’ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ರಿತನ್ಯಾ ಹೆಸರಿನಲ್ಲಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದಕ್ಕೆ ಮುಂದಾಗಿದ್ದರು. ಆಗಲೇ ವಿಜಯ್, ತಮ್ಮ ಇನ್ನೊಬ್ಬ ಮಗಳು ಮೋನಿಷಾ ಸಹ ಚಿತ್ರರಂಗಕ್ಕೆ ಬರುತ್ತಾಳೆ ಎಂದು ಹೇಳಿದ್ದರು.
ಅದೀಗ ನಿಜವಾಗಿದೆ. ವಿಜಯ್ ಮಗಳು ಮೋನಿಷಾ, ಇದೀಗ ‘ಸಿಟಿ ಲೈಟ್ಸ್’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ರಿತನ್ಯಾ ಅವರನ್ನು ಜಡೇಶ್ ಹಂಪಿ, ತಮ್ಮ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಆದರೆ, ಮೋನಿಷಾ ಅವರನ್ನು ವಿಜಯ್ ಅವರೇ ಪರಿಚಯಿಸುತ್ತಿದ್ದಾರೆ. ‘ಸಿಟಿ ಲೈಟ್ಸ್’ ಚಿತ್ರವನ್ನು ಅವರೇ ನಿರ್ದೇಶನ ಮಾಡುತ್ತಿದ್ದಾರೆ.
ಒಂದು ಬ್ಯುಸಿ ರಸ್ತೆಯಲ್ಲಿ ಮೋನಿಷಾ ನಡೆದು ಬರುತ್ತಿರುವ ಪೋಸ್ಟರ್ ಇದಾಗಿದೆ. ಯಾವುದೋ ಯೋಚನೆಯಲ್ಲಿ ಕಳೆದು ಹೋಗಿರುವ ಮಧ್ಯಮ ವರ್ಗದ ಹುಡುಗಿಯಾಗಿ ಮೋನಿಷಾ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಅವರ ಪಾತ್ರವೇನು? ಚಿತ್ರದ ಕಥೆಯೇನು? ಮುಂತಾದ ಯಾವುದೇ ವಿಷಯವನ್ನು ಸದ್ಯಕ್ಕೆ ಬಹಿರಂಗೊಳಿಸಲಾಗಿಲ್ಲ.
ಅಷ್ಟೇ ಅಲ್ಲ, ಚಿತ್ರವನ್ನು ಯಾರು ನಿರ್ಮಿಸುತ್ತಾರೆ ಎಂಬ ವಿಷಯವನ್ನೂ ವಿಜಯ್ ಹೊರಹಾಕಿಲ್ಲ. ಸದ್ಯಕ್ಕೆ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರ ಯಾವಾಗ ಸೆಟ್ಟೇರುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ.
ಸದ್ಯ ‘ದುನಿಯಾ’ ವಿಜಯ್ ಅಭಿನಯದ ಮತ್ತು ನಿರ್ದೇಶನದ ‘ಭೀಮ’ ಚಿತ್ರವು ಯಶಸ್ವಿ ಪ್ರದರ್ಶನ ಕಂಡಿದ್ದು, ಇತ್ತೀಚೆಗೆ ಅಮೇಜಾನ್ ಪ್ರೈಮ್‍ನಲ್ಲಿ ಬಿಡುಗಡೆ ಆಗಿದೆ. ಈ ಮಧ್ಯೆ, ‘ದುನಿಯಾ’ ವಿಜಯ್ ಅಭಿನಯದ ಹೊಸ ಚಿತ್ರ ಘೋಷಣೆಯಾಗಿದೆ. ಇದು ಅವರ ಅಭಿನಯದ 30ನೇ ಚಿತ್ರವಾಗಿದ್ದು, ಈ ಚಿತ್ರವನ್ನು ಅವರ ಶಿಷ್ಯ ವೆಟ್ರಿವೇಲ್ ಅಲಿಯಾಸ್ ತಂಬಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಘೋಷಣೆ ಇತ್ತೀಚೆಗೆ ಅಧಿಕೃತವಾಗಿ ಆಗಿದ್ದು, ಹೊಸ ಪೋಸ್ಟರ್ ಸಹ ಬಿಡುಗಡೆ ಆಗಿದೆ.