ಇಂದ್ರಜಿತ್ ಲಂಕೇಶ್ ನಿರ್ದೇಶನದ ಚಿತ್ರಗಳ ಬಗ್ಗೆ ಯಶಸ್ವಿಯಾದ ಚಿತ್ರವೆಂದರೆ ಅದು ‘ಮೊನಾಲಿಸಾ’. 20 ವರ್ಷಗಳ ಹಿಂದೆ ಬಿಡುಗಡೆಯಾದ ಈ ಚಿತ್ರ ಸಾಕಷ್ಟು ಯಶಸ್ವಿಯಾಗಿತ್ತು. ಈಗ ಆ ಚಿತ್ರದಲ್ಲಿ ನಟಿಸಿದ ಧ್ಯಾನ್ ಮತ್ತು ಸದಾ ಅವರನ್ನು ಇಂದ್ರಜಿತ್ ಮತ್ತೊಮ್ಮೆ ಬೆಂಗಳೂರಿಗೆ ಕರೆಸಿದ್ದಾರೆ. ಅವರಿಬ್ಬರನ್ನು ಇಟ್ಟುಕೊಂಡು ‘ಮೊನಾಲಿಸಾ’ ಮಾಡುವ ಯೋಚನೆ ಏನಾದರೂ ಇದೆಯಾ? ಎಂಬ ಪ್ರಶ್ನೆ ಬರಬಹುದು.
ಅಂದಹಾಗೆ, ಧ್ಯಾನ್ ಮತ್ತು ಸದಾ ಅವರನ್ನು ಇಂದ್ರಜಿತ್ ಬೆಂಗಳೂರಿಗೆ ಕರೆಸಿದ್ದು, ಅದೇ ‘ಮೊನಾಲಿಸಾ’ ಚಿತ್ರದ 20ನೇ ವಾರ್ಷಿಕೋತ್ಸವಕ್ಕೆ. ಇಂದ್ರಜಿತ್ ನಿರ್ದೇಶನದ ಹೊಸ ಚಿತ್ರ ‘ಗೌರಿ’ ಚಿತ್ರದ ಮೂರು ಹಾಡುಗಳು ಈಗಾಗಲೇ ಬಿಡುಗಡೆಯಾಗಿವೆ. ‘ಮುದ್ದಾದ’ ಎಂಬ ಹೊಸ ಹಾಡನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ಹಾಡು ಬಿಡುಗಡೆ ಮತ್ತು ‘ಮೊನಾಲಿಸಾ’ ಚಿತ್ರದ 20ನೇ ವಾರ್ಷಿಕೋತ್ಸವವನ್ನು ಒಂದೇ ವೇದಿಕೆಯಲ್ಲಿ ಆಚರಿಸಿದರು ಇಂದ್ರಜಿತ್.
ಈ ಸಮಾರಂಭಕ್ಕೆ ಸದಾ ಮತ್ತು ಧ್ಯಾನ್ ಇಬ್ಬರೂ ಬಂದಿದ್ದರು. ಜೊತೆಗೆ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶರಣ್ ಸಹ ಇದ್ದರು. ಜೊತೆಗೆ ‘ನಾದಬ್ರಹ್ಮ’ ಹಂಸಲೇಖ ಇದ್ದರು. ಅವರೆಲ್ಲರ ಸಮ್ಮುಖದಲ್ಲಿ ಚಿತ್ರದ ಹಾಡು ಬಿಡುಗಡೆಯಾಯಿತು.
‘ಮುದ್ದಾದ ನಿನ್ನ ಹೆಸರೇನು’ ಎಂದು ಶುರುವಾಗುವ ಈ ಹಾಡಿನಲ್ಲಿ ಸಮರ್ಜಿತ್ ಲಂಕೇಶ್ ಮತ್ತು ಸಾನ್ಯ ಅಯ್ಯರ್ ಕಾಣಿಸಿಕೊಂಡಿದ್ದಾರೆ. ಜಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದು, ಕವಿರಾಜ್ ಹಾಡು ಬರೆದಿದ್ದಾರೆ. ಇನ್ನು, ನಿಹಾಲ್ ತೌರೋ ಈ ಹಾಡಿಗೆ ಧ್ವನಿಯಾಗಿದ್ದಾರೆ.
ಹಿಂದೊಮ್ಮೆ ಕನ್ನಡದಲ್ಲಿ ಯಶಸ್ವಿ ಹೀರೋ ಆಗಿದ್ದ ಸಮೀರ್ ದತ್ತಾನಿ ಅಲಿಯಾಸ್ ಧ್ಯಾನ್, ಕನ್ನಡದಲ್ಲಿ ‘ನನ್ನ ಪ್ರೀತಿಯ ಹುಡುಗಿ’, ‘ಜೂಟಾಟ’, ‘ಅಮೃತಧಾರೆ’, ‘ನೀನೇ ನೀನೇ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ‘ಲವ್ ಯೂ ಆಲಿಯಾ’ದಲ್ಲೊಂದು ಅತಿಥಿ ಪಾತ್ರದ ನಂತರ ಅವರು ಕನ್ನಡದಲ್ಲಿ ಯಾವೊಂದು ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಅದೇ ರೀತಿ ಸದಾ ಸಹ ‘ಆರಕ್ಷಕ್’ ಚಿತ್ರದ ನಂತರ ಯಾವೊಂದು ಕನ್ನಡ ಚಿತ್ರದಲ್ಲೂ ನಟಿಸಿರಲಿಲ್ಲ. ಈಗ ಬಹಳ ವರ್ಷಗಳ ನಂತರ ಅವರಿಬ್ಬರೂ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದಾರೆ.
‘ಗೌರಿ’ ಚಿತ್ರವು ಆಗಸ್ಟ್ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಈ ಚಿತ್ರದಲ್ಲಿ ಇಂದ್ರಜಿತ್ ಮಗ ಸಮರ್ಜಿತ್ ನಾಯಕನಾಗಿ ಕಾಣಿಸಿಕೊಂಡರೆ, ಸಾನ್ಯಾ ಅಯ್ಯರ್ ನಾಯಕಿಯಾಗಿದ್ದಾರೆ. ಜೊತೆಗೆ ಮಿಕ್ಕಂತೆ ಅಕುಲ್ ಬಾಲಾಜಿ, ಸಿಹಿ ಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ‘ಕಾಂತಾರ’ ಖ್ಯಾತಿಯ ಮಾಲತಿ ಸುಧೀರ್, ಸಂಪತ್ ಮೈತ್ರೇಯ ಮುಂತಾದವರು ನಟಿಸಿದ್ದಾರೆ.





