ಮೇಘಾ ಶೆಟ್ಟಿ ಕಿರುತೆರೆಯಲ್ಲಿ ಅದೆಷ್ಟು ದೊಡ್ಡ ಸ್ಟಾರ್ ನಟಿಯಾಗಿ ಗುರುತಿಸಿಕೊಂಡರೂ, ಹಿರಿತೆರೆಯಲ್ಲಿ ಅದೇ ಗೆಲುವನ್ನು ನೋಡುವುದಕ್ಕೆ ಸಾಧ್ಯವಾಗಲಿಲ್ಲ. ‘ಜೊತೆಜೊತೆಯಲಿ’ ಖ್ಯಾತಿಯ ಮೇಘಾ ಶೆಟ್ಟಿ ಅಭಿನಯದ ಮೊದಲ ಎರಡು ಚಿತ್ರಗಳಾದ ‘ಥ್ರಿಬ್ಬಲ್ ರೈಡಿಂಗ್’ ಮತ್ತು ‘ದಿಲ್ ಪಸಂದ್’ ಅಷ್ಟೇನೂ ಸದ್ದು ಮಾಡಲಿಲ್ಲ. ಮೂರನೆಯ ಚಿತ್ರವಾದ ‘ಕೈವ’ ಚಿತ್ರದಲ್ಲಿ ಅವರ ಅಭಿನಯದ ಬಗ್ಗೆ ಮೆಚ್ಚುಗೆ ಕೇಳಿಬಂದರೂ, ಚಿತ್ರ ನಿರೀಕ್ಷೆಯಷ್ಟು ಗೆಲ್ಲಲಿಲ್ಲ.
ಈಗ್ಯಾಕೆ ಮೇಘಾ ಶೆಟ್ಟಿ ವಿಷಯವೆಂದರೆ, ಭಾನುವಾರ ಆಕೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲೀ ಮೂರೂ ಚಿತ್ರತಂಡಗಳು ಆಕೆಯ ಮೊದಲ ನೋಟ ಬಿಡುಗಡೆ ಮಾಡುವ ಮೂಲಕ ಶುಭ ಕೋರಿದ್ದಾರೆ.
ಈ ಪೈಕಿ ಮೊದಲನೆಯದು ‘ಆಪರೇಷನ್ ಲಂಡನ್ ಕೆಫೆ’. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಕವೀಶ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡರೆ, ಮೇಘಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಈಗಾಗಲೇ ಈ ಚಿತ್ರದಲ್ಲಿ ತಮ್ಮ ಭಾಗದ ಕೆಲಸವನ್ನು ಮೇಘಾ ಮುಗಿಸಿದ್ದಾರೆ. ಈ ಚಿತ್ರವನ್ನು ‘ಸಡಗರ’ ರಾಘವೇಂದ್ರ ನಿರ್ದೇಶಿಸುತ್ತಿದ್ದಾರೆ.
ಇದಲ್ಲದೆ, ಪ್ರಜ್ವಲ್ ದೇವರಾಜ್ ಅಭಿನಯದ ‘ಚೀತಾ’ ಚಿತ್ರಕ್ಕೂ ಮೇಘಾ ನಾಯಕಿಯಾಗಿದ್ದಾರೆ. ‘ಆಪರೇಷನ್ ಲಂಡನ್ ಕೆಫೆ’ ಚಿತ್ರದ ಪೋಸ್ಟರ್‍ನಲ್ಲಿ ಮೇಘಾ ಸೌಮ್ಯ ಹುಡುಗಿಯಾಗಿ ಕಾಣಿಸಿಕೊಂಡರೆ, ‘ಚೀತಾ’ದಲ್ಲಿ ವ್ಯಘ್ರ ರೂಪ ತಾಳಿದ್ದಾರೆ. ಮುಖಕ್ಕೆಲ್ಲಾ ಕುಂಕುಮ ಬಳಿದುಕೊಂಡು, ಕೈಯಲ್ಲೊಂದು ಲಾಂಗ್ ಹಿಡಿದು, ದುಷ್ಟರ ಸಂಹಾರಕ್ಕೆ ಹೊರಟಿರುವಂತೆ ಕಾಣುತ್ತಾರೆ. ಈ ಚಿತ್ರವನ್ನು ಪ್ರತಿಭಾ ಅವರು ನಿರ್ಮಿಸಿದರೆ, ನೃತ್ಯ ನಿರ್ದೇಶಕ ಕಲೈ ಕುಮಾರ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.
ಇನ್ನು, ಮೇಘಾ ಅಭಿನಯದ ಮತ್ತೊಂದು ಚಿತ್ರ ‘ಗ್ರಾಮಾಯಣ’. ಹೆಸೆರೇ ಹೇಳುವಂತೆ ಇದೊಂದು ಗ್ರಾಮೀಣ ಸೊಗಡಿನ ಚಿತ್ರವಾಗಿದ್ದು, ಮೇಘಾ ಇದರಲ್ಲಿ ಹಳ್ಳಿ ಹುಡುಗಿಯಾಗಿ ಮತ್ತು ವಿನಯ್ ರಾಜಕುಮಾರ್ ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಮೇಘಾ ಸೈಕಲ್ ಮೇಲೆ ಕುಳಿತು, ಮುಗ್ಧ ಲುಕ್ ಕೊಟ್ಟಿದ್ದಾರೆ. ಈ ಚಿತ್ರವನ್ನು ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಮತ್ತು ಕೆ.ಪಿ. ಶ್ರೀಕಾಂತ್ ನಿರ್ಮಿಸಿದರೆ, ದೇವನೂರು ಚಂದ್ರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಮೊದಲ ಮೂರು ಚಿತ್ರಗಳು ಅಷ್ಟೇನೂ ಹೆಸರು ತಂದುಕೊಡದಿದ್ದರೂ, ಈ ಮೂರು ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟಿದ್ದಾರೆ. ಆ ನಿರೀಕ್ಷೆಗಳಿಗೆ ತಕ್ಕ ಹಾಗೆ ಚಿತ್ರಗಳು ಮೂಡಿಬರುತ್ತವಾ ಎಂಬುದನ್ನು ಕಾದು ನೋಡಬೇಕು.