ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಚಿತ್ರವು ಅಕ್ಟೋಬರ್ 11ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಚಿತ್ರದ ಬಿಡುಗಡೆಗೆ ಇನ್ನು ಎರಡು ವಾರಗಳಿದ್ದರೂ, ಅಷ್ಟೇನೂ ಸದ್ದಿರಲಿಲ್ಲ. ಒಂದು ದಿನ ಮುಂಚೆ ರಜನಿಕಾಂತ್ ಅಭಿನಯದ ‘ವೆಟ್ಟಾಯನ್’ ಚಿತ್ರ ಬಿಡುಗಡೆ ಆಗುತ್ತಿರುವುದರಿಂದ, ‘ಮಾರ್ಟಿನ್’ ಅಂದುಕೊಂಡಂತೆಯೇ ಬಿಡುಗಡೆಯಾಗುತ್ತದಾ? ಅಥವಾ ಮುಂದೂಡಲ್ಪಡುತ್ತದಾ? ಎಂಬ ಪ್ರಶ್ನೆ ಧ್ರುವ ಅಭಿಮಾನಿಗಳ ವಲಯದಲ್ಲಿ ಇತ್ತು.
ಆದರೆ, ಅಂದುಕೊಂಡಂತೆಯೇ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದ್ದು, ‘ಮಾರ್ಟಿನ್’ ಚಿತ್ರದ ವ್ಯಾಪಾರ ಶುರುವಾಗಿದ್ದು, ಚಿತ್ರವನ್ನು ನಿಜಾಮ್ ಪ್ರದೇಶದಲ್ಲಿ ಬಿಡುಗಡೆ ಮಾಡುವುದಕ್ಕೆ ತೆಲುಗಿನ ಜನಪ್ರಿಯ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಮುಂದಾಗಿದೆ. ಈ ಚಿತ್ರವನ್ನು ನಿಜಾಮ್ ಪ್ರದೇಶದಲ್ಲಿ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ. ಇನ್ನು, ಕರ್ನಾಟಕ, ತಮಿಳು ನಾಡು, ಕೇರಳ ಮತ್ತು ಉತ್ತರ ಭಾರತದಲ್ಲಿ ಚಿತ್ರ ಬಿಡುಗಡೆ ಮಾಡುವುದಕ್ಕೆ ಮಾತುಕತೆ ನಡೆಯುತ್ತಿದ್ದು ಸದ್ಯದಲ್ಲೇ ಯಾರೆಲ್ಲಾ ಯಾವ ಪ್ರದೇಶಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಹೊರಬೀಳಬೇಕಿದೆ.
ಇದೊಂದು ಅಂತಾರಾಷ್ಟ್ರೀಯ ಮಟ್ಟದ ಚಿತ್ರ ಎನ್ನುವ ಧ್ರುವ, ‘ಈ ಕಥೆಯಲ್ಲಿ ಎಲ್ಲವೂ ಇತ್ತು. ಒಂದು ವಿಭಿನ್ನ ಚಿತ್ರಕಥೆಗಾಗಿ ಹುಡುಕಾಡುತ್ತಿದ್ದೆ. ಚಿತ್ರ ನೋಡುತ್ತಿದ್ದಂತೆ ಪ್ರೇಕ್ಷಕರು ಸೀಟಿನಂಚಿಗೆ ಬಂದು ಕೂರುವ ನಂಬಿಕೆ ಇದೆ. ಇದು ಬರೀ ನಮ್ಮ ಭಾಷೆ ಅಥವಾ ದೇಶಕ್ಕೆ ಸೀಮಿತವಾಗಬಾರದು. ಪ್ಯಾನ್ ಇಂಡಿಯಾಗಿಂತ ಇನ್ನೊಂದು ಹೆಜ್ಜೆ ಮುಂದೆ ಏನು ಅಂತ ಯೋಚಿಸಿದಾಗ, ಯಾಕೆ ನಾವೊಂದು ಅಂತಾರಾಷ್ಟ್ರೀಯ ಸಿನಿಮಾ ಮಾಡಬಾರದು ಎಂದನಿಸಿತು. ಆ ನಿಟ್ಟಿನಲ್ಲಿ ಒಂದು ಅಂತಾರಾಷ್ಟ್ರೀಯ ಸಿನಿಮಾ ಮಾಡಿದ್ದೇವೆ’ ಎಂದರು.
‘ಮಾರ್ಟಿನ್’ ಚಿತ್ರವನ್ನು ವಾಸವಿ ಕಂಬೈನ್ಸ್ನಡಿ ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್ ಮುಂತಾದವರು ನಟಿಸಿದ್ದು, ಎ.ಪಿ. ಅರ್ಜುನ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರವಿ ಬಸ್ರೂರು ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ.