ಇತ್ತೀಚೆಗಷ್ಟೇ ಇನ್‍ಸ್ಪೆಕ್ಟರ್ ರುದ್ರನ ಅವತಾರವೆತ್ತಿದ್ದ ರಿಷಿ, ಇದೀಗ ಕೈವಾಡ ಮತ್ತು ಪವಾಡಗಳ ಕುರಿತಾದ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಈ ಹಿಂದೆ ತುಳು ಚಿತ್ರರಂಗದಲ್ಲಿ ‘ಉಮಿಲ್’ ಹಾಗೂ ‘ದೊಂಬರಾಟ’ ಚಿತ್ರಗಳನ್ನು ನಿರ್ದೇಶಿಸಿರುವ ರಂಜಿತ್ ರಾಜ್ ಸುವರ್ಣ, ರಿಷಿ ನಟನೆಯ ಹೊಸ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅಂದ ಹಾಗೆ, ಈ ಚಿತ್ರದ ಹೆಸರು ‘ಮಂಗಳಾಪುರಂ’.
‘ರುದ್ರ ಗರುಡ ಪುರಾಣ’ ಚಿತ್ರದ ನಂತರ ರಿಷಿ ನಟಿಸಲಿರುವ ಹೊಸ ಚಿತ್ರದ ಹೆಸರು ‘ಮಂಗಳಾಪುರಂ’. ಮರ್ಡರ್ ಮಿಸ್ಟ್ರಿಯಾಗಿದ್ದು, ನಂಬಿಕೆ – ಮೂಡನಂಬಿಕೆ, ಕೈವಾಡ ಹಾಗೂ ಪವಾಡಗಳ ಸುತ್ತ ಕಥೆ ಸಾಗಲಿದೆ. ವಿಶೇಷವೆಂದರೆ, ರಿಷಿ ಜೊತೆಯಲ್ಲಿ ಕಾಶಿನಾಥ್ ಪುತ್ರ ಅಭಿಮನ್ಯು ಕಾಶಿನಾಥ್ ಸಹ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ರಿಷಿ ಮತ್ತು ಅಭಿ ಪಾತ್ರವೇನು ಎಂದು ಚಿತ್ರತಂಡ ಗೌಪ್ಯವಾಗಿಟ್ಟಿದೆ.
‘ಮಂಗಳಾಪುರಂ’ ಚಿತ್ರವನ್ನು ಪ್ರಸನ್ನ ತಂತ್ರಿ ಮೂಡಬಿದ್ರೆ ಹಾಗೂ ರಾಮ್ ಪ್ರಸಾದ್ ನಿರ್ಮಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಕಾಲಿಡುತ್ತಿದ್ದಾರೆ. ಸದ್ಯ ಚಿತ್ರದ ಮೊದಲ ನೋಟ ಮಾತ್ರ ಬಿಡುಗಡೆಯಾಗಿದೆ. ಇನ್ನು, ಚಿತ್ರೀಕರಣವೇನಿದ್ದರೂ ಜೂನ್ ತಿಂಗಳಿನಿಂದ ಪ್ರಾರಂಭವಾಗಲಿದೆಯಂತೆ. ಈ ಚಿತ್ರದಲ್ಲಿ ಯಾರೆಲ್ಲಾ ಇರುತ್ತಾರೆ ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಸದ್ಯಕ್ಕೆ ಆಯ್ಕೆ ನಡೆಯುತ್ತಿದ್ದು, ಆದಷ್ಟು ಬೇಗ ಕಲಾವಿದರ ಮತ್ತು ತಂತ್ರಜ್ಞರ ಕುರಿತು ಚಿತ್ರತಂಡ ಮಾಹಿತಿ ನೀಡಲಿದೆಯಂತೆ.
ಈ ಚಿತ್ರಕ್ಕಾಗಿ ಬೆಂಗಳೂರು ಅಲ್ಲದೆ ಕಾರ್ಕಳ, ತೀರ್ಥಹಳ್ಳಿ, ಮಡಿಕೆರಿ ಮುಂತತಾದ ಕಡೆ ಚಿತ್ರೀಕರಣ ನಡೆಯಲಿದೆ. ಅನೂಪ್ ಸಿಳೀನ್ ಸಂಗೀತ ಮತ್ತು ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ.





