Mysore
17
scattered clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಮಲಯಾಳಂಗೆ KVN ಪ್ರೊಡಕ್ಷನ್ಸ್; ‘ಮಂಜುಮ್ಮೆಲ್ ಬಾಯ್ಸ್’ ನಿರ್ದೇಶಕರೊಂದಿಗೆ ಚಿತ್ರ

ಕನ್ನಡದ ಜನಪ್ರಿಯ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಕೆವಿಎನ್‍ ಪ್ರೊಡಕ್ಷನ್ಸ್, ನೂರಾರು ಕೋಟಿಗಳನ್ನು ಈಗಾಗಲೇ ಚಿತ್ರರಂಗದಲ್ಲಿ ಹೂಡಿಕೆ ಮಾಡಿದೆ. ಯಶ್‍ ಅಭಿನಯದ ‘ಟಾಕ್ಸಿಕ್‍’, ಧ್ರುವ ಸರ್ಜಾ ಅಭಿನಯದ ‘ಕೆಡಿ – ದಿ ಡೆವಿಲ್‍’ ಮತ್ತು ತಮಿಳಿನ ವಿಜಯ್‍ ಅಭಿನಯದಲ್ಲಿ ಚಿತ್ರಗಳನ್ನು ನಿರ್ಮಿಸುತ್ತಿದೆ. ಇದೆಲ್ಲದರ ಮಧ್ಯೆ, KVN ಪ್ರೊಡಕ್ಷನ್ಸ್ನ ವೆಂಕಟ್‍ನಾರಾಯಣ್‍, ಮಲಯಾಳಂನಲ್ಲಿ ಚಿತ್ರವೊಂದನ್ನು ನಿರ್ಮಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಚಿತ್ರವನ್ನು ಅವರು ತೆಸ್ಪಿಯನ್ ಫಿಲ್ಮ್ಸ್ ಜೊತೆಗೆ ಸೇರಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ಕಳೆದ ವರ್ಷ ವಿಜಯ್‍ ಅಭಿನಯದ ಚಿತ್ರವನ್ನು ನಿರ್ಮಿಸುವ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದ KVN ಪ್ರೊಡಕ್ಷನ್ಸ್ ಸಂಸ್ಥೆಯು, ಇದೀಗ ಮಲಯಾಳಂ ಚಿತ್ರವನ್ನು ನಿರ್ಮಿಸುವ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದೆ. ಈ ಚಿತ್ರವನ್ನು ಚಿದಂಬರಂ ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ವರ್ಷ ಮಲಯಾಳಂನಲ್ಲಿ ಬಿಡುಗಡೆಯಾದ ಅತ್ಯಂತ ಯಶಸ್ವಿ ಚಿತ್ರ ‘ಮಂಜುಮ್ಮೆಲ್ ಬಾಯ್ಸ್’ ನಿರ್ಮಿಸಿದ್ದು, ಇದೇ ಚಿದಂಬರಂ. ಇನ್ನು, ‘ರೋಮಾಂಚನಂ’, ‘ಆವೇಶಂ’ ಮುಂತಾದ ಚಿತ್ರಗಳಿಗೆ ಕಥೆ ಬರೆದಿರುವ ಜೀತು ಮಾಧವನ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ.

ಈ ಕುರಿತು ಮಾತನಾಡಿರುವ ವೆಂಕಟ್‍ ಕೆ ನಾರಾಯಣ್‍, ’ನಾವು ನಮ್ಮ ಸಂಸ್ಥೆಯಿಂದ ಭಿನ್ನ ಬಗೆಯ, ಸದಭಿರುಚಿಯ ಮನರಂಜನಾತ್ಮಕ ಸಿನಿಮಾಗಳನ್ನ ನೀಡಲು ಮುಂದಾಗಿದ್ದೇವೆ. ಅದರಂತೆ ಹೊಸ ಚಿಂತನೆ ಇರುವ ನಿರ್ದೇಶಕರ ಮೂಲಕ ಪ್ರೇಕ್ಷಕರನ್ನು ತಲುಪುವತ್ತ ಹೆಜ್ಜೆ ಇಟ್ಟಿದ್ದೇವೆ. ಈ ಪ್ರಯತ್ನದಲ್ಲಿ ಇದೀಗ ಮಲಯಾಳಂನಲ್ಲಿ ಚಿತ್ರರಂಗಕ್ಕೆ ಕಾಲಿಡುವುದರ ಜೊತೆಗೆ, ಮಲಯಾಳಂನ ನಮ್ಮ ಮೊದಲ ಚಿತ್ರಕ್ಕಾಗಿ ಚಿದಂಬರಂ ಅವರ ಜೊತೆಗೆ ಕೈಜೋಡಿಸಿದ್ದೇವೆ’ ಎನ್ನುತ್ತಾರೆ.

ಈ ಹೊಸ ಚಿತ್ರದ ಪೋಸ್ಟರ್‍ ಬಿಡುಡೆಯಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ತಾಯಿಯೊಬ್ಬಳು ನಗರದತ್ತ ನಡೆದು ಹೋಗುತ್ತಿರುವ ಮತ್ತು ಆಕೆಯನ್ನು ಅವಳ ಮಗ ನೋಡುತ್ತಿರುವ ದೃಶ್ಯವಿದೆ. ಇದೊಂದು ತಾಯಿ-ಮಗನ ಸೆಂಟಿಮಮೆಂಟ್‍ನ ಚಿತ್ರವಿರಬಹುದು ಎಂದು ಹೇಳಲಾಗುತ್ತಿದೆ.

KVN ಪ್ರೊಡಕ್ಷನ್ಸ್ ಸಂಸ್ಥೆಯ ಮೊದಲ ಮಲಯಾಳಂ ಚಿತ್ರಕ್ಕೆ ಶೈಜು ಖಾಲೆದ್‍ ಛಾಯಾಗ್ರಹಣ, ಸುಶಿನ್‍ ಶ್ಯಾಮ್‍ ಸಂಗೀತವಿದೆ. ಇನ್ನು, ಕಲಾವಿದರ ಪಟ್ಟಿ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.

Tags:
error: Content is protected !!