ಈಗಾಗಲೇ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರು ಮನು ಅಭಿನಯದ ‘ಕೇದಾರನಾಥ್ ಕುರಿ ಫಾರಂ’ ಎಂಬ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಮಧ್ಯೆ, ಅವರ ಇನ್ನೊಂದು ಚಿತ್ರ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರೀಕರಣ ಸದ್ಯದಲ್ಲೇ ಶುರುವಾಗಲಿದೆ.
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಚಿತ್ರೀಕರಣ ಶುರುವಾಗುತ್ತಿರುವುದು ಈಗಾದರೂ, ಸಂಕ್ರಾಂತಿ ಹಬ್ಬದಂದು ಮುಹೂರ್ತವಾಗಿತ್ತು. ಯೋಗರಾಜ್ ಭಟ್ ನಿರ್ಮಾಣದ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದಲ್ಲಿ ಮಡೆನೂರು ಮನುಗೆ ನಾಯಕಿಯಾಗಿ ಮೌನ ಗುಡ್ಡೆಮನೆ ನಟಿಸುತ್ತಿದ್ದಾರೆ.
ಚಿತ್ರ ಪ್ರಾರಂಭವಾದಾಗ ನಿರ್ದೇಶಕರಾಗಿದ್ದವರು ಯೋಗರಾಜ್ ಭಟ್ ಶಿಷ್ಯ ಶ್ರೇಯಸ್ ರಾಜ್ ಶೆಟ್ಟಿ. ಆದರೆ, ಈಗ ನಿರ್ದೇಶಕರು ಬದಲಾಗಿದ್ದಾರೆ. ಶ್ರೇಯಸ್ ರಾಜ್ ಶೆಟ್ಟಿ ಬದಲು, ಈಗ ಆ ಸ್ಥಾನಕ್ಕೆ ಚಿತ್ರಸಾಹಿತಿ ಕಂ ನಿರ್ದೇಶಕರಾದ ಕೆ. ರಾಮ್‍ನಾರಾಯಣ್ ಬಂದಿದ್ದಾರೆ. ಇನ್ನು, ಈ ಚಿತ್ರಕ್ಕೆ ಯೋಗರಾಜ್ ಭಟ್ ಅವರ ಮತ್ತೊಬ್ಬ ಶಿಷ್ಯ ಯೋಗಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದರು. ಚಿತ್ರದ ಕಥೆಯು 70ರ ದಶಕದ ಕಾಲಘಟ್ಟದಲ್ಲಿ ನಡೆಯಲಿದೆ ಎಂದು ಹೇಳಲಾಗಿತ್ತು. ಈಗ ಶೀರ್ಷಿಕೆ ಅದೇ ಇದ್ದರೂ, ಕಥೆ ಮತ್ತು ನಿರ್ದೇಶಕರು ಬದಲಾಗಿದ್ದಾರೆ. ಈಗ ಯೋಗರಾಜ್ ಭಟ್ ಹಾಗೂ ಇಸ್ಲಾಮುದ್ದೀನ್ ಅವರು ಚಿತ್ರಕ್ಕೆ ಕಥೆ ಬರೆದಿದ್ದಾರೆ.
ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಎ.ಕೆ ಮತ್ತು ವಿದ್ಯಾ ನಿರ್ಮಿಸುತ್ತಿರುವ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಫಸ್ಟ್ ಲುಕ್ ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿದೆ. ಸಕಲೇಶಪುರ, ಹಾಸನ, ರಾಮನಗರ, ಬೆಂಗಳೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು ಮನೋಮೂರ್ತಿ ಸಂಗೀತ ನೀಡುತ್ತಿದ್ದಾರೆ.
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದಲ್ಲಿ ಮಡೆನೂರು ಮನು, ಮೌನ ಗುಡ್ಡೆಮನೆ, ರಂಗಾಯಣ ರಘು, ದಿಗಂತ್, ಶರತ್ ಲೋಹಿತಾಶ್ವ, ಸೋನಾಲ್ ಮೊಂತೆರೊ ಮುಂತಾದವರು ನಟಿಸುತ್ತಿದ್ದಾರೆ.





