Mysore
19
overcast clouds
Light
Dark

‘ಕೇದಾರನಾಥ್‍ ಕುರಿ ಫಾರಂ’ನಲ್ಲಿ ಮಡೆನೂರು ಮನು; ಆ.30ಕ್ಕೆ ಬಿಡುಗಡೆ

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರು ಮನು ಅಭಿನಯದ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರವು ಸಂಕ್ರಾಂತಿಯಂದು ಪ್ರಾರಂಭವಾಗಿತ್ತು. ಆ ನಂತರ ಚಿತ್ರ ಏನಾಯಿತೋ ಗೊತ್ತಿಲ್ಲ. ಈ ಮಧ್ಯೆ, ಮನು ನಾಯಕರಾಗಿ ನಟಿಸಿದ್ದ ಮೊದಲ ಚಿತ್ರ ‘ಕೇದಾರನಾಥ್‍ ಕುರಿ ಫಾರಂ’ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ.

‘ಕೇದಾರನಾಥ್‍ ಕುರಿ ಫಾರಂ’, ಮನು ನಾಯಕನಾಗಿ ನಟಿಸಿದ ಮೊದಲ ಚಿತ್ರ. ಈ ಚಿತ್ರ ಎರಡ್ಮೂರು ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು. ವರ್ಷದ ಹಿಂದೆಯೇ ಟ್ರೇಲರ್‍ ಸಹ ಬಿಡುಗಡೆಯಾಗಿತ್ತು. ಈಗ ಚಿತ್ರ ಸಂಪೂರ್ಣವಾಗಿ ಇದೇ ಆಗಸ್ಟ್ 30ಕ್ಕೆ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಈ ಚಿತ್ರವನ್ನು ಶೀನು ಸಾಗರ್‍ ನಿರ್ದೇಶನ ಮಾಡಿದರೆ, ನಟರಾಜ್‍ ನಿರ್ಮಾಣ ಮಾಡಿದ್ದಾರೆ.

ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಶೀನು ಸಾಗರ್, ‘ಇದೊಂದು ಮಜ ಕೊಡುವಂತ ಚಿತ್ರ. ಈಗಾಗಲೇ ಚಿತ್ರದ ಕೆಲಸಗಳು ಮುಗಿದಿವೆ. ಇದೊಂದು ಗ್ರಾಮೀಣ ಸೊಗಡಿನ ಚಿತ್ರ. ಇನ್ನು, ಚಿತ್ರಕ್ಕೆ ಯಾಕೆ ಈ ಶೀರ್ಷಿಕೆ ಎಂದು ಹೇಳಿಬಿಟ್ಟರೆ, ಕಥೆ ಹೇಳಿದಂಗೆ ಆಗುತ್ತದೆ. ಹಾಗಾಗಿ, ಸಸ್ಪೆನ್ಸ್ ಇರಲಿ. ಯಾಕೆ, ಏನು ಎಂಬುದನ್ನು ನೇರವಾಗಿ ಚಿತ್ರಮಂದಿರದಲ್ಲೇ ನೋಡಿಬಿಡಿ’ ಎಂದರು.

ಕುರಿ ಫಾರಂಗೆ ಕೇದಾರನಾಥ್ ಎಂದು ಹೆಸರಿಟ್ಟಿದು ಎಷ್ಟು ಸರಿ? ವಿಷಯವೂ ಚರ್ಚೆಗೆ ಬಂತು. ಇದಕ್ಕೆ ಉತ್ತರಿಸಿದ ಅವರು, ‘ಮಂಜುನಾಥ್ ಬಾರ್‍ ಅಂತ ಇಟ್ಟಿರೋದು ನೋಡಿರುತ್ತೇವೆ ಓಂಸಾಯಿ ಮಟನ್‍ ಸ್ಟಾಲ್ ಎಂದು ಹೆಸರು ಇರಲ್ವಾ? ನನ್ನ ಸಿನಿಮಾಗೆ ಈ ಶೀರ್ಷಿಕೆ ಸರಿಯಾಗಿದ್ದರಿಂದ ಇದನ್ನು ಇಟ್ಟಿದ್ದೀನಿ. ನನಗೆ ಯಾರನ್ನೂ ನೋಯಿಸುವ ಉದ್ದೇಶವಿಲ್ಲ. ನಾನು ಒಬ್ಬ ಹಿಂದೂ. ನಮ್ಮ ಧರ್ಮಕ್ಕೆ ಚ್ಯುತಿ ಬರುವಂತ ಕೆಲಸ ಮಾಡಲ್ಲ’ ಎಂದರು ಶೀನು ಸಾಗರ್‍.

ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರು ಮನು ಮಾತನಾಡಿ, ‘ನಮ್ಮ ಕಡೆ ಹಳ್ಳಿಯಲ್ಲಿ ಏನು ಪ್ರಾರಂಭಿಸಿದರೂ ಮನೆದೇವ್ರು ಹೆಸರು ಇಡೋದು ಸಹಜ. ನನ್ನದೂ ಹಾಸನದಲ್ಲಿ ಸ್ವಂತದ್ದೊಂದು ಕುರಿ ಫಾರಂ ಇದೆ. ಮಂಜುನಾಥ ಕುರಿ ಫಾರಂ ಅಂತ ಹೆಸರು. ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಿಜಕ್ಕೂ ಸಿನಿಮಾ ನೋಡೋರಿಗೆ ಇದೊಂದು ಹಬ್ಬದ ಊಟ. ಇವತ್ತು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಬರುತ್ತಿಲ್ಲ ಎಂದು ಹೇಳಿ ನಿಜಕ್ಕೂ ಬರದ ಹಾಗೆ ಮಾಡಿಬಿಟ್ಟಿದ್ದಾರೆ. ಬೇರೆ ಭಾಷೆಯ ಚಿತ್ರಗಳನ್ನು ನೋಡಿ ಅವರ ಕೆಲಕ್ಷನ್‍ ಏರಿಸುತ್ತಿದ್ದಾರೆ. ಹಾಗಾಗಿ, ಮೊದಲು ನಮ್ಮ ಕನ್ನಡದ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಿ’ ಎಂದರು.

‘ಕೇದಾರನಾಥ್‍ ಕುರಿ ಫಾರಂ’ ಚಿತ್ರದಲ್ಲಿ ಮನುಗೆ ನಾಯಕಿಯಾಗಿ ಶಿವಾನಿ ನಟಿಸಿದ್ದು, ಮಿಕ್ಕಂತೆ ಕರಿಸುಬ್ಬು, ಟೆನ್ನಿಸ್‍ ಕೃಷ್ಣ, ಸುನಂದ, ಮುತ್ತುರಾಜ್ ಮುಂತಾದವರು ನಟಿಸಿದ್ದಾರೆ. ಸನ್ನಿ ಡಾನ್‍ ಅಬ್ರಹಾಂ ಸಂಗೀತ ಸಂಯೋಜಿಸಿದ್ದು, ರಾಕೇಶ್‍ ತಿಲಕ್‍ ಛಾಯಾಗ್ರಹಣ ಮಾಡಿದ್ದಾರೆ.