ಗುರುಪೂರ್ಣಿಮೆಯ ದಿನದಂದು ಉದ್ಯಮಿ ವಿಜಯ್ ಟಾಟಾ, ತಮ್ಮ ಅಮೃತಾ ಸಿನಿ ಕ್ರಾಫ್ಟ್ ಸಂಸ್ಥೆಯ ಮೂಲಕ ಆರು ಚಿತ್ರಗಳನ್ನು ಒಂದೇ ವೇದಿಕೆಯಲ್ಲಿ ಘೋಷಣೆ ಮಾಡಿದ್ದರು. ಈ ಸಂಸ್ಥೆಯ ಲೋಗೋವನ್ನು ನಟ-ನಿರ್ದೇಶಕ ವಿ. ರವಿಚಂದ್ರನ್ ಹಾಗೂ ಶ್ರೀಮುರಳಿ ಬಿಡುಗಡೆ ಮಾಡಿದ್ದರು. ಈ ಆರು ಚಿತ್ರಗಳ ಪೈಕಿ ಈಗ ಎರಡು ಚಿತ್ರದ ಸ್ಕ್ರಿಪ್ಟ್ ಪೂಜೆಯನ್ನು ಮಾಡಿ ಕೆಲಸಕ್ಕೆ ಚಾಲನೆ ನೀಡಿದ್ದಾರೆ.
ಈ ಎರಡು ಚಿತ್ರಗಳ ಪೈಕಿ ವಿನಯ್ ರಾಜಕುಮಾರ್ ನಟನೆಯಲ್ಲಿ ಡಿ.ಎಸ್.ಪಿ ವರ್ಮ ನಿರ್ದೇಶನದ ಚಿತ್ರಕ್ಕೆ ಪೂಜೆ ಮಾಡುವ ಮೂಲಕ ತಮ್ಮ ಮೊದಲ ಸಿನಿಮಾ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಹಾಗೆಯೇ ಮತ್ತೊಂದು ಚಿತ್ರವನ್ನು ಮಾನಸ ನಿರ್ದೇಶನ ಮಾಡುತ್ತಿದ್ದಾರೆ. ಈ ಎರಡು ಚಿತ್ರದ ಕೆಲಸಗಳಿಗೆ ಚಾಲನೆ ಸಿಕ್ಕಿದ್ದು, ಸದ್ಯದಲ್ಲೇ ಚಿತ್ರದ ಮುಹೂರ್ತ ಸಹ ನೆರವೇರಲಿದೆ.
ಈ ಕುರಿತು ಮಾತನಾಡಿರುವ ನಿರ್ಮಾಪಕ ವಿಜಯ್ ಟಾಟಾ, ‘ಕನ್ನಡ ಚಿತ್ರರಂಗದಲ್ಲಿ ಚಿತ್ರಗಳನ್ನು ನಿರ್ಮಿಸುವ ಮೂಲಕ ಹೊಸ ನಿರ್ದೇಶಕ, ಕಲಾವಿದರಿಗೆ ಅವಕಾಶ ಸಿಗುವಂತಾಗಬೇಕು. ನಮ್ಮ ಉದ್ದೇಶ ಒಂದೆರಡು ಚಿತ್ರಗಳನ್ನು ಮಾಡಿ ಹೋಗುವುದಲ್ಲ. ನಿರಂತರವಾಗಿ ಚಿತ್ರೋದ್ಯಮದಲ್ಲಿ ನಮ್ಮನ್ನ ನಾವು ತೊಡಗಿಸಿಕೊಳ್ಳಬೇಕೆಂಬುದು ನಿರ್ಧರಿಸಿದ್ದೇವೆ. ನಿರ್ಮಾಣದ ಜೊತೆಗೆ ವಿತರಣೆಯಲ್ಲಿ ತೊಡಗಿಸಿಕೊಳ್ಳುವ ಯೋಚನೆಯೂ ಇದೆ. ಪ್ರತಿ ಶುಕ್ರವಾರವೂ ನಮ್ಮ ಸಂಸ್ಥೆಯು ಒಂದಲ್ಲ ಒಂದು ಕನ್ನಡ ಚಿತ್ರಗಳ ಜೊತೆ ಇದ್ದೇ ಇರುತ್ತೇವೆ’ ಎಂದು ಹೇಳಿಕೊಂಡಿದ್ದಾರೆ.
ಅಮೃತಾ ಸಿನಿ ಕ್ರಾಫ್ಟ್ ನಿರ್ಮಿಸುತ್ತಿರುವ ಚಿತ್ರಗಳ ಪೈಕಿ, ಒಂದು ಚಿತ್ರದಲ್ಲಿ ಅಜೇಯ್ ರಾವ್ ನಾಯಕನಾಗಿ ನಟಿಸುತ್ತಿರುವುದಷ್ಟೇ ಅಲ್ಲ, ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಎರಡನೇ ಚಿತ್ರವನ್ನು ಡಿ.ಎಸ್.ಪಿ ವರ್ಮ ನಿರ್ದೇಶಿಸಿದರೆ, ವಿನಯ್ ರಾಜಕುಮಾರ್ ನಾಯಕನಾಗಿ ಕಣಿಸಿಕೊಳ್ಳುತ್ತಿದ್ದಾರೆ. ಮೂರನೇ ಚಿತ್ರಕ್ಕೆ ‘ಸಿಂಪಲ್’ ಸುನಿ ನಿರ್ದೇಶಕ. ನಾಲ್ಕನೆಯ ಚಿತ್ರವನ್ನು ರಿಷಬ್ ಆರ್ಯ ನಿರ್ದೇಶಿಸಲಿದ್ದು, ವಿಕ್ರಂ ರವಿಚಂದ್ರನ್ ನಾಯಕನಾಗಿ ನಟಿಸುತ್ತಿದ್ದಾರೆ. ಐದನೇ ಚಿತ್ರದ ಮೂಲಕ ನಟ ಪ್ರಶಾಂತ್ ಸಿದ್ದಿ ನಿರ್ದೇಶಕರಾದರೆ, ವಿಕ್ಕಿ ವರುಣ್ ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಆರನೇ ಚಿತ್ರವನ್ನು ಮಂಜು ಸ್ವರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಇದಲ್ಲದೆ, ಏಳನೇ ಚಿತ್ರದಲ್ಲಿ ರವಿಚಂದ್ರನ್ ನಟಿಸುತ್ತಿರುವುದಾಗಿ ಈಗಾಗಲೇ ಹೇಳಿಕೊಂಡಿದ್ದಾರೆ.





