ಆಂಜನೇಯನಿಗೆ ಹಲವು ಹೆಸರುಗಳಿವೆ. ಈ ಪೈಕಿ ‘ಪಿಂಗಾಕ್ಷ’ ಎಂಬ ಹೆಸರು ಸಹ ಒಂದು. ಈಗ ಹೊಸಬರ ತಂಡವೊಂದು ‘ಪಿಂಗಾಕ್ಷ’ ಎಂಬ ಚಿತ್ರ ಮಾಡುತ್ತಿದ್ದು, ಈ ಚಿತ್ರಕ್ಕೆ ಇತ್ತೀಚೆಗೆ ನಂದಿನಿ ಲೇಔಟ್‌ದಲ್ಲಿರುವ ಶ್ರೀ ಬಲಮುರಿ ವರಸಿದ್ದಿ ವಿನಾಯಕನ ಸನ್ನಿದಿಯಲ್ಲಿ ಮುಹೂರ್ತ ಸಮಾರಂಭ ನಡೆಯಿತು.
ಸಗಿಟ್ಟರಿಯನ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಿ. ವಾಸುದೇವ ರಾವ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಟೆಕ್ಕಿಯಾಗಿರುವ ಬಿ. ಭರತ್ ವಾಸುದೇವ್ ಸಿನಿಮಾಕ್ಕೆ ಕಥೆ, ಚಿತ್ರಕತೆ ಬರೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವು ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ.
‘ಪಿಂಗಾಕ್ಷ’ ಕುರಿತು ಮಾತನಾಡುವ ನಿರ್ದೇಶಕ ಭರತ್ ವಾಸುದೇವ್, ಇದೊಂದು ಹಾರರ್ ಚಿತ್ರ ಎಂದು ಹೇಳುತ್ತಾರೆ. ‘ಇಲ್ಲಿಯವರೆಗೂ ಹಾರರ್ ಚಿತ್ರಗಳು ಬಂದಿರಬಹುದು. ಆದರೆ, ಇಲ್ಲಿ ಭಿನ್ನ ಎನ್ನುವಂತೆ ಪ್ರಾರಂಭದಿಂದ ಕೊನೆಯವರೆಗೂ ನೋಡುಗರಿಗೆ ಭಯಾನಕ ದೃಶ್ಯಗಳು ಮೈ ಜುಂ ಅನಿಸುವುದು ಹೈಲೈಟ್. ‘ಪಿಂಗಾಕ್ಷ’ ಎನ್ನುವುದು ಸಂಸ್ಕ್ರತ ಪದ. ನಮ್ಮ ಕತೆಗೆ ಹೊಂದಿಕೊಳ್ಳುವುದರಿಂದ ಅದನ್ನೇ ಶೀರ್ಷಿಕೆಯಾಗಿ ಇಡಲಾಗಿದೆ. ಮನೆ ಯಜಮಾನ ದುಷ್ಟ ಶಕ್ತಿಯಿಂದ ತನ್ನ ಕುಟುಂಬವನ್ನು ಕಾಪಾಡಿಕೊಳ್ಳಲು ಯಾವ ರೀತಿ ಹೋರಾಟ ನಡೆಸುತ್ತಾನೆ. ಇದಕ್ಕೆ ದೈವಶಕ್ತಿ ಹೇಗೆ ಸಹಕಾರ ನೀಡುತ್ತದೆ’ ಎಂಬುದು ಚಿತ್ರದ ಕಥೆ’ ಎಂದರು.
ಈ ಚಿತ್ರದಲ್ಲಿ ಎಲ್ಲಾ ಅಂಶಗಳು ಇವೆ ಎನ್ನುವ ಭರತ್, ‘ನಾಲ್ಕು ಹಾಡು, ಮೂರು ಫೈಟ್ ಇರಲಿದೆ. ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು, ಮಡಕೇರಿ, ಕಲಪಿ, ಮುನ್ನಾರ್, ಕೊಚ್ಚಿನ್ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ’ ಎಂದರು.
ಈ ಚಿತ್ರಕ್ಕೆ ಸಂತೋಷ್‌ಕುಮಾರ್ ನಾಯಕ. ರಿಶಾ ಗೌಡ ನಾಯಕಿ. ಮಿಕ್ಕಂತೆ ಭಾರ್ಗವ್, ಅವಿನಾಶ್, ರಂಗಾಯಣ ರಘು, ಕಿಟ್ಟಿ ತಾಳಿಕೋಟೆ, ತೆಲುಗಿನ ನಾಗಮಹೇಶ್, ಬಲ ರಾಜವಾಡಿ, ಶರತ್ ಲೋಹಿತಾಶ್ವ, ವರ್ಧನ್, ಆಶಾ ಮುಂತಾದವರು ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಕ್ರಿಸ್ಟೋಫರ್ ಜಾಯ್ಸನ್ ಸಂಗೀತ, ಜೆ.ಕೆ.ಗಣೇಶ್ ಛಾಯಾಗ್ರಹಣವಿದೆ.





