30ನೇ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಿತ್ರೋತ್ಸವವು ಇತ್ತೀಚೆಗೆ ಮುಗಿದಿದೆ. ಡಿ.4ರಿಂದ 11ರವರೆಗೆ ನಡೆದ ಈ ಚಿತ್ರೋತ್ಸವದಲ್ಲಿ ದೇಶ-ವಿದೇಶಗಳ ಸುಮಾರು 300ಕ್ಕೂ ಹೆಚ್ಚು ಸಿನೆಮಾಗಳು ವಿವಿಧ ವಿಭಾಗಗಳ ಸ್ಪರ್ಧೆಯಲ್ಲಿ ಪ್ರದರ್ಶನಗೊಂವೆ. ಈ ಪೈಕಿ ಚಿತ್ರೋತ್ಸವದ ಭಾರತೀಯ ಭಾಷಾ ಚಿತ್ರಗಳ ವಿಭಾಗದಲ್ಲಿ ‘ಲಚ್ಚಿ’ ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಸಪ್ತಗಿರಿ ಕ್ರಿಯೇಷನ್ಸ್ ಲಾಂಛನದಲ್ಲಿ ಕೃಷ್ಣೇಗೌಡ ನಿರ್ಮಿಸಿ, ನಿರ್ದೇಶಿಸಿರುವ ‘ಲಚ್ಚಿ’ ಚಿತ್ರವು ಮಾಜಿ ಸಚಿವೆ ಮತ್ತು ಹಿರಿಯ ಲೇಖಕಿ ಡಾ. ಬಿ. ಟಿ. ಲಲಿತಾ ನಾಯ್ಕ್ ಅವರ ಜನಪ್ರಿಯ ಕಾದಂಬರಿಯನ್ನು ಆಧರಿಸಿದೆ. ತಾಯಿಯೊಬ್ಬಳು ಹೆಣ್ಣು ಮಗುವೊಂದನ್ನು ಉಳಿಸಿಕೊಳ್ಳಲು ಹೋರಾಡುವ ಕಥೆಯನ್ನು ‘ಲಚ್ಚಿ’ ಚಿತ್ರದ ಮೂಲಕ ಹೇಳಲಾಗಿದೆ.
ಈ ಚಿತ್ರೋತ್ಸವದಲ್ಲಿ ಭಾರತದ ವಿವಿಧ ಭಾಷೆಗಳ ಸುಮಾರು 80ಕ್ಕೂ ಹೆಚ್ಚು ಚಿತ್ರಗಳು ಸ್ಪರ್ಧೆಯಲ್ಲಿದ್ದು, ಅಂತಿಮವಾಗಿ ‘ಲಚ್ಚಿ’ ಚಿತ್ರವು ಭಾರತೀಯ ಭಾಷಾ ಚಿತ್ರಗಳ ವಿಭಾಗದಲ್ಲಿ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದಿದೆ. ಸುಮಾರು ಒಂದೂವರೆ ದಶಕದ ಹಿಂದೆ ಕನ್ನಡ ಚಿತ್ರವೊಂದು ಈ ಪ್ರಶಯನ್ನು ಗೆದ್ದಿತ್ತು. ಈಗ ಬಹಳ ಸಮಯದ ನಂತರ ಕನ್ನಡದ ಚಿತ್ರವೊಂದಕ್ಕೆ ಈ ಚಿತ್ರೋತ್ಸವದಲ್ಲಿ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಂತಾಗಿದೆ.
ಕೃಷ್ಣೇಗೌಡ ನಿರ್ಮಿಸಿದ ‘ನಾನು ಕುಸುಮ’ ಮತ್ತು ‘ಪಿಂಕಿ ಎಲ್ಲಿ’ ಚಿತ್ರಗಳು ಇದಕ್ಕೂ ಮೊದಲು ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದವು. ಇದೀಗ ಅವರು ನಿರ್ಮಿಸಿ, ನಿರ್ದೇಶಿಸುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಲಚ್ಚಿ’ ಚಿತ್ರವು ಕೋಲ್ಕತ್ತಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವುದು ವಿಶೇಷ.
‘ಲಚ್ಚಿ’ ಚಿತ್ರದಲ್ಲಿ ಗ್ರೀಷ್ಮಾ ಶ್ರೀಧರ್, ತೇಜಸ್ವಿನಿ ಗೌಡ, ನಾರಾಯಣ ಸ್ವಾಮಿ, ಕಾವೇರಿ ಶ್ರೀಧರ್, ಮಹಾದೇವ ಹಡಪದ, ಕೃಷ್ಣೇಗೌಡ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.