KVN ಪ್ರೊಡಕ್ಷನ್ಸ್ ಸಂಸ್ಥೆಯು ಕನ್ನಡವಲ್ಲದೆ ಈಗಾಗಲೇ ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರಗಳನ್ನು ನಿರ್ಮಿಸುತ್ತಿದೆ. ಈಗ ತೆಲುಗು ಮತ್ತು ಹಿಂದಿ ಭಾಷೆಗಳು KVN ಪ್ರೊಡಕ್ಷನ್ಸ್ ಸಂಸ್ಥೆಯು ಎರಡು ದೊಡ್ಡ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದೆ.
ಈ ಪೈಕಿ ತೆಲುಗಿನಲ್ಲಿ KVN ಪ್ರೊಡಕ್ಷನ್ಸ್ ಸಂಸ್ಥೆಯು ಚಿರಂಜೀವಿ ಅಭಿನಯದ ಹೊಸ ಚಿತ್ರವನ್ನು ನಿರ್ಮಿಸುತ್ತಿದೆ. ಇದು ಚಿರಂಜೀವಿ ಅಭಿನಯದ 158ನೇ ಚಿತ್ರವಾಗಿದ್ದು, ಸದ್ಯಕ್ಕೆ ‘ಮೆಗಾ 158’ ಎಂಬ ಹೆಸರಿಡಲಾಗಿದೆ. ಈ ಹಿಂದೆ ‘ವಾಲ್ಟರ್ ವೀರಯ್ಯ’ ಚಿತ್ರವನ್ನು ನಿರ್ದೇಶಿಸಿದ್ದ ಬಾಬಿ ಕೊಲ್ಲಿ, ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇತ್ತೀಚೆಗೆ ಚಿರಂಜೀವಿ ಹುಟ್ಟುಹಬ್ಬದಂದು ಚಿತ್ರದ ಅಧಿಕೃತ ಘೋಷಣೆಯಾಗಿದ್ದು. ದಸರಾ ಸಮಯದಲ್ಲಿ ಚಿತ್ರದ ಮುಹೂರ್ತವಾಗಲಿದ್ದು, ವರ್ಷದ ಕೊನೆಯಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಲಿದೆ.
ಇನ್ನು, ಹಿಂದಿಯಲ್ಲಿ ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಅಭಿನಯದಲ್ಲಿ ‘ಹೈವಾನ್’ ಎಂಬ ಚಿತ್ರದ ನಿರ್ಮಾಣಕ್ಕೆ ಸಂಸ್ಥೆಯು ಕೈಹಾಕಿದೆ. ಈ ಹಿಂದೆ ಅಕ್ಷಯ್ ಮತ್ತು ಸೈಫ್ ಇಬ್ಬರೂ ‘ಯೇ ದಿಲ್ಲಗಿ’, ‘ಮೇ ಕಿಲಾಡಿ ತೂ ಅನಾರಿ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. 2008ರಲ್ಲಿ ಬಿಡುಗಡೆಯಾದ ‘ತಶನ್’ ಚಿತ್ರದ ನಂತರ ಜೊತೆಯಾಗಿ ನಟಿಸಿರಲಿಲ್ಲ. ಈಗ 17 ವರ್ಷಗಳ ನಂತರ ಅಕ್ಷಯ್ ಮತ್ತು ಸೈಫ್ ಅಲಿ ಖಾನ್ ಜೊತೆಯಾಗಿ ನಟಿಸುತ್ತಿದ್ದಾರೆ.
‘ಹೈವಾನ್’ ಚಿತ್ರದ ಮುಹೂರ್ತ ಶನಿವಾರ ಆಗಿದ್ದು, ಈ ಸಂದರ್ಭದಲ್ಲಿ ಕೆ. ವೆಂಕಟ್‍ನಾರಾಯಣ್ ಸಹ ಹಾಜರಿದ್ದರು. ಈ ಚಿತ್ರವನ್ನು KVN ಪ್ರೊಡಕ್ಷನ್ಸ್ ಮತ್ತು ಥೆಸ್ಪಿಯನ್ ಫಿಲಂಸ್ ಜೊತೆಯಾಗಿ ನಿರ್ಮಿಸುತ್ತಿವೆ.
ಈ ಚಿತ್ರವನ್ನು ಮಲಯಾಳಂನ ಹಿರಿಯ ಮತ್ತು ಜನಪ್ರಿಯ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಮಲಯಾಳಂನ ‘ಒಪ್ಪಂ’ ಚಿತ್ರದ ರೀಮೇಕ್ ಆಗಿದ್ದು, ‘ಹೈವಾನ್’ ಚಿತ್ರದಲ್ಲಿ ಅಕ್ಷಯ್ ಕುಮಾರ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸೈಫ್ ಅಲಿ ಖಾನ್ ಅಂಧನಾಗಿ ನಟಿಸುತ್ತಿದ್ದಾರೆ.





