‘ಫಾದರ್’ ಮತ್ತು ‘ಬ್ರ್ಯಾಟ್’ ಚಿತ್ರಗಳನ್ನು ಮುಗಿಸಿರುವ ಕೃಷ್ಣ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜ. ಕೃಷ್ಣ ಸದ್ದಿಲ್ಲದೆ ‘ಲವ್ ಮಾಕ್ಟೇಲ್ 3’ ಚಿತ್ರದ ಕೆಲಸಗಳನ್ನು ಪ್ರಾರಂಭಿಸಿದ್ದು, ಈಗಾಗಲೇ ಮೊದಲ ಹಂತದ ಚಿತ್ರೀಕರಣವನ್ನೂ ಮುಗಿಸಿದ್ದಾರೆ.
‘ಲವ್ ಮಾಕ್ಟೇಲ್ 3’ ಚಿತ್ರವು ‘ಲವ್ ಮಕ್ಟೇಲ್ 2’ನ ಮುಂದುವರೆದ ಭಾಗವಾಗಿದ್ದು, ಈ ಚಿತ್ರದ ಕೆಲಸಗಳು ಸುಮಾರು ಎರಡೂವರೆ ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು. ಈ ಮಧ್ಯೆ, ಕೃಷ್ಣ ಬೇರೆ ಚಿತ್ರಗಳನ್ನು ಒಪ್ಪಿಕೊಂಡಿದ್ದರಿಂದ, ‘ಲವ್ ಮಾಕ್ಟೇಲ್ 3’ನ ಕೆಲಸಗಳು ವಿಳಂಬವಾಯ್ತು. ಇದೀಗ ‘ಫಾದರ್’ ಮತ್ತು ‘ಬ್ರ್ಯಾಟ್’ ಚಿತ್ರಗಳ ಚಿತ್ರೀಕರಣ ಮುಗಿದಿದ್ದು, ‘ಲವ್ ಮಾಕ್ಟೇಲ್ 3’ ಚಿತ್ರದ ಒಂದು ಹಂತದ ಚಿತ್ರೀಕರಣವನ್ನೂ ಕೃಷ್ಣ ಮುಗಿಸಿದ್ದಾರೆ.
‘ಲವ್ ಮಾಕ್ಟೇಲ್ 3’ ಕುರಿತು ಮಾತನಾಡುವ ಕೃಷ್ಣ, ಮೊದಲೆರಡು ಭಾಗಗಳಂತೆ ಮೂರನೇ ಭಾಗವೂ ಅಷ್ಟೇ ವಿಭಿನ್ನವಾಗಿರುತ್ತದೆ. ಪಾತ್ರಗಳು ಅದೇ ಇರುತ್ತದೆ. ಆದರೆ, ಇದು ಬೇರೆ ತರಹದ ಸಿನಿಮಾ ಆಗಿರುತ್ತದೆ. ಹಳೆಯ ಪಾತ್ರಗಳ ಜೊತೆಗೆ, ಇನ್ನೊಂದಿಷ್ಟು ಹೊಸ ಪಾತ್ರಗಳು ಸೇರ್ಪಡೆಯಾಗುತ್ತವೆ. ಎರಡನೇ ಭಾಗದಲ್ಲಿ ಕೆಲಸ ಮಾಡಿದ ತಾಂತ್ರಿಕ ತಂಡವೇ ಇಲ್ಲೂ ಮುಂದುವರೆಯುತ್ತದೆ. ಆ ಎರಡು ಚಿತ್ರಗಳಿಗೆ ಹೋಲಿಸಿದರೆ, ಈ ಚಿತ್ರದ ಬಜೆಟ್ ಸಹ ಜಾಸ್ತಿ ಇರುತ್ತದೆ. ಹಾಗಂತ ಸುಮ್ಮನೆ ಖರ್ಚು ಮಾಡುತ್ತಿಲ್ಲ. ಚಿತ್ರಕ್ಕೆ ಎಷ್ಟು ಬೇಕೋ ಅಷ್ಟು ಖರ್ಚು ಮಾಡುತ್ತಿದ್ದೇವೆ’ ಎನ್ನುತ್ತಾರೆ.
‘ಲವ್ ಮಾಕ್ಟೇಲ್ 3’ ಮಾಡುವುದು ಅಷ್ಟು ಸುಲಭದ ಮಾತಲ್ಲ ಎನ್ನುವ ಕೃಷ್ಣ, ‘ಒಂದು ಕಥೆ ಮಾಡುವುದು ಸುಲಭ. ಅದರ ಮುಂದುವರೆದ ಭಾಗ ಮಾಡುವುದು ನಿಜಕ್ಕೂ ಕಷ್ಟ. ಒಂದು ಆ್ಯಕ್ಷನ್ ಚಿತ್ರದ ಸೀಕ್ವೆಲ್ ಮಾಡುವುದು ಸುಲಭದ ವಿಷಯ. ಆದರೆ, ಭಾವನಾತ್ಮಕ ಕಥೆ ಮಾಡುವುದು ಸವಾಲಿನ ಕೆಲಸ. ಅದರಲ್ಲೂ ಮೂರನೆಯ ಭಾಗ ಮಾಡುವುದು ಇನ್ನೂ ಕಷ್ಟ. ನಾನು ಮೊದಲ ಭಾಗದ ಕಥೆ ಬರೆದಾಗ, ಕೇವಲ 19 ದಿನಗಳಲ್ಲಿ ಕಥೆ-ಚಿತ್ರಕಥೆ ಬರೆದಿದ್ದೆ. ಎರಡನೆಯ ಭಾಗ ಬರೆಯುವುದಕ್ಕೆ ಆರು ತಿಂಗಳು ಬೇಕಾಯಿತು. ಮೂರನೆಯ ಭಾಗ ಬರೆಯುವುದಕ್ಕೆ ಮೂರೂವರೆ ವರ್ಷಗಳು ಬೇಕಾದವು’ ಎನ್ನುತ್ತಾರೆ.
ಇನ್ನು, ‘ಬ್ರ್ಯಾಟ್’ ಮತ್ತು ‘ಫಾದರ್’ ಚಿತ್ರಗಳ ಪೈಕಿ ಯಾವ ಚಿತ್ರ ಮೊದಲು ಬಿಡುಗಡೆಯಾಗುತ್ತದೆ ಎಂಬ ಪ್ರಶ್ನೆಗೆ, ‘ಇಬ್ಬರಲ್ಲಿ ಯಾರು ಮೊದಲು ಬರುತ್ತಾರೆ ಎಂದು ನನಗೂ ಸರಿಯಾಗಿ ಗೊತ್ತಿಲ್ಲ. ಎರಡೂ ಚಿತ್ರಗಳ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಎರಡೂ ಚಿತ್ರಗಳ ಕೆಲಸಗಳು ಒಂದು ಹಂತಕ್ಕೆ ಬಂದ ನಂತರ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗುತ್ತದೆ. ವಿಶೇಷವೆಂದರೆ, ಇವೆರಡೂ ಚಿತ್ರಗಳು ಐದು ಭಾಷೆಗಳಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ ಚಿತ್ರಗಳು ಎನ್ನುತ್ತಾರೆ ಕೃಷ್ಣ.





