ಕೆ.ಆರ್.ಜಿ ಸ್ಟುಡಿಯೋಸ್‍ನ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಅವರು ಮಲಯಾಳಂನಲ್‍ಲಿ ಚಿತ್ರವೊಂದನ್ನು ನಿರ್ಮಿಸಲಿದ್ದಾರೆ ಎಂಬ ಸುದ್ದಿಯೊಂದು ಕೆಲವು ತಿಂಗಳುಗಳ ಹಿಂದೆ ಕೇಳಿ ಬಂದಿತ್ತು. ಆ ನಂತರ ಈ ವಿಷಯದ ಕುರಿತು ಯಾವುದೇ ಅಪ್‍ಡೇಟ್ ಇರಲಿಲ್ಲ. ಈಗ ಕೊನೆಗೂ ಕಾರ್ತಿಕ್ ಮತ್ತು ಯೋಗಿ, ಮಲಯಾಳಂ ಚಿತ್ರ ಪ್ರಾರಂಭಿಸಿದ್ದಾರೆ.
ಚಿತ್ರಕ್ಕೆ ‘ಪಡಕ್ಕಳಂ’ ಎಂಬ ಹೆಸರನ್ನು ಇಡಲಾಗಿದ್ದು, ಇತ್ತೀಚೆಗೆ ಚಿತ್ರದ ಕೊಚ್ಚಿಯಲ್ಲಿ ಮುಹೂರ್ತವಾಗಿದೆ. ಈ ಸಂದರ್ಭದಲ್ಲಿ ಚಿತ್ರದ ಮೋಷನ್ ಪೋಸ್ಟರ್ ಸಹ ಬಿಡುಗಡೆ ಆಗಿದೆ.
‘ಪಡಕ್ಕಳಂ’ ಒಂದು ಹಾಸ್ಯಭರಿತ ಫ್ಯಾಂಟಸಿಯ ಚಿತ್ರವಾಗಿದ್ದು, ಚಿತ್ರವನ್ನು ಮನು ಸ್ವರಾಜ್ ನಿರ್ದೇಶಿಸುತ್ತಾರೆ. ಈ ಚಿತ್ರ ಅವರ ಮೊದಲ ಪ್ರಯತ್ನವಾಗಿದ್ದು, ಇದನ್ನು ಕಾರ್ತಿಕ್ ಗೌಡ, ಯೋಗಿ ಜಿ ರಾಜ್ ಮತ್ತು ವಿಜಯ್ ಸುಬ್ರಹ್ಮಣ್ಯಂ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಜೊತೆಗೆ ಖ್ಯಾತ ಮಲಯಾಳಂ ನಟ, ನಿರ್ಮಾಪಕ ವಿಜಯ್ ಬಾಬು ಫ್ರೈಡೇ ಫಿಲಂ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.
ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯು ಕನ್ನಡದಲ್ಲಿ ಸದ್ಯ ಎರಡು ಚಿತ್ರಗಳನ್ನು ನಿರ್ಮಸುತ್ತಿದೆ. ಈ ಪೈಕಿ ದಿಗಂತ್ ಮತ್ತು ಧನ್ಯಾ ರಾಮ್‍ಕುಮಾರ್ ಅಭಿನಯದ ‘ಪೌಡರ್’ ಚಿತ್ರದ ಚಿತ್ರೀಕರಣ ಮುಗಿದು ಆಗಸ್ಟ್ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಇದಲ್ಲದೆ, ಶಿವರಾಜಕುಮಾರ್ ಮತ್ತು ಧನಂಜಯ್ ಅಭಿನಯದಲ್ಲಿ ‘ಉತ್ತರಕಾಮಡ’ ಚಿತ್ರವನ್ನು ನಿರ್ಮಿಸುತ್ತಿದ್ದು, ಅರ್ಧ ಚಿತ್ರೀಕರಣ ಮುಗಿದಿದೆ. ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದಾರೆ.
ಇವೆರಡೂ ಚಿತ್ರಗಳ ಜೊತೆಗೆ ‘ಕಿರಿಕ್ ‘et’ 11’ ಎಂಬ ಇನ್ನೊಂದು ಕನ್ನಡ ಚಿತ್ರವನ್ನು ಈಗಾಗಲೇ ಘೋಷಿಸಲಾಗಿದ್ದು, ಇದರಲ್ಲಿ ನವೀನ್ ಶಂಕರ್ ಮತ್ತು ದಾನಿಶ್ ಸೇಠ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಮನ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.
ಇನ್ನು, ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿರುವ ಕೆ.ಆರ್.ಜಿ. ಸ್ಟುಡಿಯೋಸ್, ಮಲಯಾಳಂ ನಿರ್ದೇಶಕಿಯ ಜೊತೆಗೆ ತಮಿಳು ಚಿತ್ರವೊಂದನ್ನು ಮಾಡುವುದಕ್ಕೆ ಹೊರಟಿದೆ. ಮಲಯಾಳಂನಲ್ಲಿ ಬೆಂಗಳೂರು ಡೇಸ್’, ‘ಉಸ್ತಾದ್ ಹೊಟೇಲ್’, ‘ಮಂಜಡಿಕುರು’, ‘ಕೂಡೆ’ ಮತ್ತು ಇತ್ತೀಚಿನ ‘ವಂಡರ್ ವುಮನ್’ನಂತಹ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ಅಂಜಲಿ ಮೆನನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ಇನ್ನಷ್ಟೇ ಶುರುವಾಗಬೇಕಿದೆ.





