‘ಯಲಾ ಕುನ್ನಿ’ ಚಿತ್ರದಲ್ಲಿ ಕೋಮಲ್ ದ್ವಿಪಾತ್ರಗಳಲ್ಲಿ ನಟಿಸುತ್ತಿರುವುದು, ಒಂದು ಪಾತ್ರ ‘ಸಂಪತ್ತಿಗೆ ಸವಾಲ್’ ಚಿತ್ರದ ಸಾಹುಕಾರ್ ಸಿದ್ಧಪ್ಪನನ್ನು ನೆನಪಿಸುವ ಪಾತ್ರವಾಗಿರುವುದು ಗೊತ್ತೇ ಇದೆ. ಆದರೆ, ಸಿದ್ಧಪ್ಪನಾಗಿ ಕೋಮಲ್ ಹೇಗೆ ಕಾಣಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇತ್ತು. ಈಗ ಅದಕ್ಕೂ ಉತ್ತರ ಸಿಕ್ಕಿದೆ.
ಗಣೇಶ ಹಬ್ಬದ ಪ್ರಯುಕ್ತ ‘ಯಲಾ ಕುನ್ನಿ’ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಕೋಮಲ್, ವಜ್ರಮುನಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಬಾಯಲ್ಲೊಂದು ಚುಟ್ಟಾ, ಹೆಗಲ ಮೇಲಿನ ವಸ್ತ್ರಕ್ಕೆ ಅಂಟಿದ ರಕ್ತ, ಮುಖದಲ್ಲಿ ಸಿಟ್ಟು … ಇವೆಲ್ಲವೂ ವಜ್ರಮುನಿ ಅವರನ್ನು ನೆನಪಿಸುತ್ತದೆ.
ಅಂದಹಾಗೆ, ಈ ‘ಯಲಾ ಕುನ್ನಿ’ ಎನ್ನುವುದು ಅವರದೇ ಜನಪ್ರಿಯ ಸಂಭಾಷಣೆ. ಈ ಸಂಭಾಷಣೆಯನ್ನು ಅವರು ‘ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಹೇಳಿದ್ದರು. ಅಲ್ಲಿಂದ ಈ ಸಂಭಾಷಣೆ ಸಾಕಷ್ಟು ಜನಪ್ರಿಯವಾಗಿದ್ದು. ಇದೀಗ ಅದೇ ‘ಯಲಾ ಕುನ್ನಿ’ ಎಂಬ ಪದಗಳು ಕೋಮಲ್ ಅಭಿನಯದ ಚಿತ್ರದ ಶೀರ್ಷಿಕೆಯಾಗಿದೆ.
‘ಯಲಾ ಕುನ್ನಿ’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಕುಂಬಳಕಾಯಿ ಒಡೆಯಲಾಗಿದೆ. ಸದ್ಯ ಚಿತ್ರೀಕರಣ ಮುಗಿಸಿರುವ ಚಿತ್ರತಂಡವು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಈ ಚಿತ್ರಕ್ಕಾಗಿ ಬೆಂಗಳೂರು, ಮೈಸೂರು ಹಾಗೂ ಶ್ರೀರಂಗಪಟ್ಟಣದಲ್ಲಿ ಚಿತ್ರೀಕರಣ ನಡೆದಿದೆ. ಶ್ರೀರಂಗಪಟ್ಟಣದಲ್ಲಿ ಚಿತ್ರಕ್ಕಾಗಿ ವಿಶೇಷ ಸೆಟ್ ಸಹ ಹಾಕಲಾಗಿತ್ತು.
ಕೋಮಲ್ ಜೊತೆಗೆ ದತ್ತಣ್ಣ, ಸಾಧು ಕೋಕಿಲ, ಮಿತ್ರ, ಸುಚೇಂದ್ರ ಪ್ರಸಾದ್, ಶಿವರಾಜ್ ಕೆ ಆರ್ ಪೇಟೆ, ತಬಲಾ ನಾಣಿ, ರಾಜು ತಾಳಿಕೋಟೆ, ಸುಮನ್ ನಗರ್‍ಕರ್, ಮಾನಸಿ ಸುಧೀರ್, ಜಯಸಿಂಹ ಮುಸುರಿ, ರಘು ರಾಮನಕೊಪ್ಪ ಮುಂತಾದವರು ನಟಿಸಿದ್ದು ಈ ಚಿತ್ರದ ನಾಯಕಿಯರಾಗಿ ನಿಸರ್ಗ ಅಪ್ಪಣ್ಣ ಮತ್ತು ‘ಗಿಚ್ಚಿಗಿಲಿಗಿಲಿ’ಯ ಅಮೃತಾ ಬಣ್ಣ ಹಚ್ಚಿದ್ದಾರೆ. ವಿಶೇಷವೆಂದರೆ, ವಜ್ರಮುನಿ ಯವರ ಮೊಮ್ಮೊಗ ಆಕರ್ಶ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಿದ್ದಾರೆ. ಮಯೂರ್ ಪಟೇಲ್ ಖಳ ನಾಯಕನಾಗಿ ನಟಿಸಿದ್ದಾರೆ.
ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್ ಮತ್ತು ಸಹನ ಮೂರ್ತಿ ನಿರ್ಮಿಸಿರುವ ‘ಯಲಾ ಕುನ್ನಿ’ ಚಿತ್ರಕ್ಕೆ ಎನ್.ಆರ್. ಪ್ರದೀಪ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.