Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

‘ಕೋಣ’ದ ಕಥೆಯೊಂದಿಗೆ ಬಂದ ಕೋಮಲ್

ಕೋಮಲ್‍ ಈಗಾಗಲೇ ‘ಕಾಲಾಯ ನಮಃ’, ‘ರೋಲೆಕ್ಸ್’, ‘ಎಲಾ ಕುನ್ನಿ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಹೀಗಿರುವಾಗಲೇ, ಅವರು ಇನ್ನೂ ಒಂದು ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್‍ ಸಿಗ್ನಲ್‍ ನೀಡಿದ್ದಾರೆ. ಹೆಸರು ‘ಕೋಣ’.

ಇದೊಂದು ಪ್ಯಾನ್‍ ಇಂಡಿಯಾ ಚಿತ್ರವಾಗಿದ್ದು, ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಈ ಹಿಂದೆ ಜಗ್ಗೇಶ್‍ ಅಭಿನಯದ ‘8 MM’ ಚಿತ್ರವನ್ನು ನಿರ್ದೇಶಿಸಿದ್ದ ಹರಿಕೃಷ್ಣ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್, ವಿಕ್ಟರಿ ಸಿನಿಮಾಸ್‍ನಲ್ಲಿ ಬಿಡುಗಡೆ ಆಗಿದೆ.

ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ನಟ ಕೋಮಲ್ ಕುಮಾರ್, ‘’ಕೋಣ’ ಒಂದು ಮಜವಾದ ಕಥೆ. ಚಾರ್ಲಿ ಚಾಪ್ಲಿನ್‍ ಕಷ್ಟದಲ್ಲಿ ಸಿಕ್ಕಾಗ ಜನ ಹೇಗೆ ಎಂಜಾಯ್ ಮಾಡುತ್ತಾರೋ, ಅದೇ ರೀತಿ ಚಿತ್ರದಲ್ಲಿ ನಾನು ಸಮಸ್ಯಗೆ ಸಿಲುಕಿದಾಗ ಖುಷಿಪಡುತ್ತಾರೆ. ಮೂಢನಂಬಿಕೆಯ ಕುರಿತಾದ ಚಿತ್ರವಿದು. ಇದರಲ್ಲಿ ನನ್ನನ್ನು ಹೊಸದಾಗಿ ತೋರಿಸುತ್ತಿದ್ದಾರೆ. ಇಲ್ಲಿ ರೋಬೋಟ್‍ ಒಂದು ಪ್ರಮುಖ ಪಾತ್ರ ವಹಿಸುತ್ತದೆ’ ಎಂದರು.

ನಿರ್ದೇಶಕರಾದ ಹರಿಕೃಷ್ಣ ಮಾತನಾಡಿ, ‘ಅತಿ ಶೀಘ್ರದಲ್ಲೇ ಶೂಟಿಂಗ್ ಶುರು ಮಾಡುತ್ತೇವೆ. ದೀಪಾವಳಿ ಬಳಿಕ ಮುಹೂರ್ತ ಮಾಡುತ್ತೇವೆ. ‌ಹಳ್ಳಿಯಲ್ಲಿ ಕೋಣದ ಜೊತೆ ನಡೆಯುವ ಕಥೆ’ ಇದು ಎಂದರು.

ವಿಶೇಷವೆಂದರೆ, ಈ ಚಿತ್ರದಲ್ಲಿ ನಾಯಕಿಯಾಗಿ ತನಿಷಾ ಕುಪ್ಪುಂಡ ನಟಿಸುತ್ತಿರುವುದಷ್ಟೇ ಅಲ್ಲ, ಕಾರ್ತಿಕ್‍ ಕಿರಣ್ ಸಂಕಲ್ಪ ಮತ್ತು ರವಿಕಿರಣ್‍ ಜೊತೆಗೂಡಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ‘ಮೊದಲು ಆಲ್ಬಂ ಸಾಂಗ್ ಮಾಡಬೇಕು ಎಂಬ ಆಸೆ ಇತ್ತು. ಆ ಬಳಿಕ ಸಿನಿಮಾ ಮಾಡುವ ಹಂತಕ್ಕೆ ಬಂದಿದ್ದೇವೆ. ಎಲ್ಲಾ ಸ್ನೇಹಿತರು ಜೊತೆಗೂಡಿ ಸಿನಿಮಾ ಶುರು ಮಾಡಿದ್ದೇವೆ. ಕೋಮಲ್ ಸರ್ ನಮ್ಮ ಜೊತೆಗೆ ಸೇರಿಕೊಂಡಿದ್ದು ಖುಷಿ ಇದೆ’ ಎಂದರು.

ಕುಪ್ಪುಂಡ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಶಶಾಂಕ್ ಶೇಷಗಿರಿ ಸಂಗೀತ ಹಾಗೂ ಗಿರೀಶ್ ಆರ್. ಗೌಡ ಛಾಯಾಗ್ರಹಣವಿದೆ.

Tags: