ಕೋಮಲ್ ಅಭಿನಯದ ನಾಲ್ಕು ಚಿತ್ರಗಳು ಬೇರೆ ಬೇರೆ ಹಂತಗಳಲ್ಲಿವೆ. ‘ಕೋಣ’, ‘ಕುಟೀರ’, ‘ರೋಲೆಕ್ಸ್’ ಮತ್ತು ‘ಕಾಲಾಯ ನಮಃ’ ಚಿತ್ರಗಳ ಪೈಕಿ ಯಾವ ಚಿತ್ರ ಮೊದಲು ಬಿಡುಗಡೆಯಾಗುತ್ತದೆ ಎಂದು ಈಗಲೇ ಅಂದಾಜು ಮಾಡುವುದು ಕಷ್ಟ. ಹೀಗಿರುವಾಗಲೇ, ಅವರು ಸದ್ದಿಲ್ಲದೆ ಒಂದು ತಮಿಳು ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರ ಇದೇ ಮೇ.30ರಂದು ಬಿಡುಗಡೆ ಆಗುತ್ತಿದೆ.
ಒಂದು ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿರುವುದಾಗಿ ಕೋಮಲ್ ಸುಮಾರು ಒಂದು ವರ್ಷದ ಹಿಂದೆಯೇ ಹೇಳಿಕೊಂಡಿದ್ದರು. ತಮಿಳಿನ ಜನಪ್ರಿಯ ನಟು ಪ್ರಭು ಅವರೊಂದಿಗಿನ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ‘ರಾಜಪುತ್ರನ್’ ಹೆಸರಿನ ಆ ಚಿತ್ರ ಮೇ.30ರಂದು ಬಿಡುಗಡೆಯಾಗುತ್ತಿದೆ.
‘ರಾಜಪುತ್ರನ್’ ಚಿತ್ರದ ಟ್ರೇಲರ್ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದು, ಈ ಟ್ರೇಲರ್‌ನಲ್ಲಿ ಬಾಯಲ್ಲಿ ಸಿಗಾರ್ ಹಚ್ಚಿಕೊಂಡು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಎಂಟ್ರಿ ಕೊಡುವ ದೃಶ್ಯವನ್ನು ನೋಡಬಹುದು. ಈ ಚಿತ್ರದಲ್ಲಿ ಹಿರಿಯ ನಟ ಪ್ರಭು ಜೊತೆಗೆ ವೆಟ್ರಿ, ಕೃಷ್ಣ ಪ್ರಿಯಾ, ಮನ್ಸೂರ್ ಅಲಿಖಾನ್ ಮುಂತಾದವರು ನಟಿಸಿದ್ದು, ಮಹಾಕಂದನ್ ನಿರ್ದೇಶನ ಮಾಡಿದ್ದಾರೆ.
ಕೋಮಲ್ ಇದಕ್ಕೂ ಮುನ್ನ ಕಳೆದ 2014ರಲ್ಲಿ ಬಿಡುಗಡೆಯಾಗಿದ್ದ ‘ಐಂದಾಂ ತಲೈಪಮುರೈ ಸಿದ್ಧ ವೈದ್ಯ ಶಿಖಾಮಣಿ’ ಎಂಬ ಚಿತ್ರದಲ್ಲಿ ನಟಿಸಿದ್ದರು. ಭರತ್, ನಂದಿತಾ, ಶ್ವೇತಾ ಮುಂತಾದವರು ನಟಿಸಿದ್ದ ಈ ಚಿತ್ರ ಬಿಡುಗಡೆಯಾಗಿ ಸುಮಾರು 11 ವರ್ಷಗಳ ನಂತರ ಕೋಮಲ್ ಅಭಿನಯದ ಇನ್ನೊಂದು ತಮಿಳು ಚಿತ್ರ ಬಿಡುಗಡೆಯಾಗುವುದಕ್ಕೆ ಸಿದ್ಧವಾಗುತ್ತಿದೆ.
ಇನ್ನು, ಕೋಮಲ್ ಅಭಿನಯದ ಕನ್ನಡ ಚಿತ್ರವೊಂದು ಬಿಡುಗಡೆಯಾಗದೆ ಆರೇಳು ತಿಂಗಳುಗಳಾಗಿವೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಅವರ ಅಭಿನಯದ ಮತ್ತು ನಿರ್ಮಾಣದ ‘ಯಲಾ ಕುನ್ನಿ’ ಚಿತ್ರ ಬಿಡುಗಡೆ ಆಗಿತ್ತು. ಆದರೆ, ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.





