ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ಕ್ರಿಕೆಟ್ ಟೂರ್ನಿಗಳು ನಡೆಯುತ್ತಿವೆ. ಈ ಸಾಲಿಗೆ ಈಗ ಕೆಸಿಎಲ್ ಸಹ ಒಂದು. ಅಂದರೆ ಕರ್ನಾಟಕ ಕ್ರಿಕೆಟ್ ಲೀಗ್. ಈ ಕ್ರಿಕೆಟ್ ಟೂರ್ನಿಯನ್ನು ದುಬೈನಲ್ಲಿರುವ ಅನಿವಾಸಿ ಕನ್ನಡಿಗರಿಗೆಂದೇ ವಿಶೇಷವಾಗಿ ಆಯೋಜಿಸಲಾಗಿದೆ.
ದುಬೈನಲ್ಲಿರುವ ಅನಿವಾಸಿ ಕನ್ನಡಿಗರು ಚಂದನವನದ ಕಲಾವಿದರು ಹಾಗೂ ತಂತ್ರಜ್ಞರನ್ನು ಒಂದೇ ವೇದಿಕೆಯಲ್ಲಿ ಕಂಡು ಸಂಭ್ರಮಿಸುವಂತೆ ಮಾಡುವ ಸಲುವಾಗಿ ಕರ್ನಾಟಕ ಸೆಲೆಬ್ರಿಟಿ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಇತ್ತೀಚಿಗೆ ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್‍ನಲ್ಲಿ ತಂಡದ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ.
ಈ ಕಾರ್ಯಕ್ರಮಕ್ಕೆ ಶಾಸಕ ಶ್ರೀವತ್ಸ ಸೇರಿದಂತೆ ಹಲವು ಗಣ್ಯರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ನಟರಾದ ‘ಡಾರ್ಲಿಂಗ್’ ಕೃಷ್ಣ, ರವಿ ಚೇತನ್, ನಿರ್ದೇಶಕ ತರುಣ್ ಸುಧೀರ್, ಪವನ್ ಒಡೆಯರ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಿವಾಸಿ ಕನ್ನಡಿಗ ಮಯೂರ್ ಮಾಸ್ಟರ್, ‘ದುಬೈನಲ್ಲಿರುವ ಅನಿವಾಸಿ ಕನ್ನಡಿಗರು ಒಂದುಗೂಡಿ ಕರ್ನಾಟಕ ಸೆಲೆಬ್ರಿಟಿ ಲೀಗ್ (KCL) ಸೀಸನ್ ೧ ಆಯೋಜಿಸುತ್ತಿದ್ದಾರೆ. ಏಪ್ರಿಲ್ 28 ರಿಂದ ಮೇ 3 ರವರೆಗೂ ದುಬೈನಲ್ಲಿ ಪಂದ್ಯಗಳು ನಡೆಯಲಿದೆ. ಕನ್ನಡ ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರು ಮಾತ್ರ ಭಾಗವಹಿಸಲಿದ್ದಾರೆ. ಅವರಿಗಾಗಿಯೇ ಈ ಟೂರ್ನಿ ಆಯೋಜಿಸಲಾಗಿದೆ. ದುಬೈನಲ್ಲಿರುವ ಸುಮಾರು 10 ಸಾವಿರ ಕನ್ನಡಿಗರನ್ನು ಒಂದುಗೂಡಿಸುವುದೇ ಈ ಕೆಸಿಎಲ್‍ನ ಉದ್ದೇಶ’ ಎಂದರು.
ಅನಿವಾಸಿ ಕನ್ನಡಿಗ ಸಿರಾಜ್ ಮಾತನಾಡಿ, ‘ಕೋವಿಡ್‍ಗೂ ಮೊದಲೇ ದುಬೈನಲ್ಲಿ ಅನಿವಾಸಿ ಕನ್ನಡಿಗರ ಸಂಘ ಹುಟ್ಟಿಕೊಂಡಿತ್ತು. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಕನ್ನಡಿಗರನ್ನು ಒಂದೆಡೆ ಸೇರಿಸುವ ಉದ್ದೇಶ ನಮ್ಮದಾಗಿತ್ತು. ಕೋವಿಡ್ ಸಮಯದಲ್ಲಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದಾಗ ಅವರಿಗೆ ವಿಮಾನ ಸೇವೆ ಸೇರಿದಂತೆ ಬೇರೆಬೇರೆ ರೀತಿಯಲ್ಲಿ ನಮ್ಮ ಸಂಘ ನೆರವಾಗಿ ನಿಂತಿದೆ. ಜೊತೆಗೆ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಆದರೆ ಒಂದು ದೊಡ್ಡ ಕಾರ್ಯಕ್ರಮ ಮಾಡಿ ಎಲ್ಲರನ್ನೂ ಒಂದೆಡೆ ಸೇರಿಸಲು ಸಾಧ್ಯವಾಗಿರಲಿಲ್ಲ. ಕ್ರಿಕೆಟ್ ಹೆಚ್ಚು ಜನಪ್ರಿಯವಾಗಿರುವುದರಿಂದ ಕನ್ನಡದ ಸೆಲೆಬ್ರಿಟಿಗಳನ್ನು ದುಬೈಗೆ ಕರೆಸಲು ಈ ಟೂರ್ನಿ ಮಾಡುತ್ತಿದ್ದೇವೆ. ಇದರಿಂದ ಎಲ್ಲಾ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ದುಬೈನಲ್ಲಿನ ಕನ್ನಡಿಗರಿಗೆ ಸಿಗಲಿದೆ’ ಎಂದರು.
ಈ ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಲಿದೆ. 12 ಓವರ್‍ಗಳ ಪಂದ್ಯ ಇದ್ದಾಗಿದ್ದು, ಎರಡು ಗುಂಪಿನಲ್ಲಿ ತಲಾ ಐದು ತಂಡಗಳಿವೆ. ಪ್ರತಿ ತಂಡ ನಾಲ್ಕು ಪಂದ್ಯಗಳನ್ನಾಡಲಿದೆ. ಪ್ರತಿ ಗುಂಪಿನ ಟಾಪ್ ಎರಡು ತಂಡಗಳು ನಾಕೌಟ್ ಪಂದ್ಯ ಆಡಲಿದೆ. ಪಂದ್ಯದ ನೇರಪ್ರಸಾರವೂ ಇರಲಿದೆ. ‘ಲೂಸ್ ಮಾದ’ ಯೋಗಿ, ಕೃಷ್ಣ, ತರುಣ್ ಸುಧೀರ್ ಸೇರಿದಂತೆ ಹಲವರು ತಂಡದ ನಾಯಕರಾಗಲಿದ್ದಾರೆ.