Mysore
21
few clouds

Social Media

ಮಂಗಳವಾರ, 27 ಜನವರಿ 2026
Light
Dark

ಮದ್ದಾನೆಯಂತಹ ನಾಯಕನ ‘ಕರಿಕಾಡ’ ಚಿತ್ರದ ಟೀಸರ್ ಬಿಡುಗಡೆ

karikaada

ಇತ್ತೀಚಿನ ದಿನಗಳಲ್ಲಿ ಕಾಡುಗಳಲ್ಲಿ ಚಿತ್ರೀಕರಣ ಮಾಡುವ ಮತ್ತು ಕಾಡು ಸಹ ಪ್ರಮುಖ ಪಾತ್ರವಹಿಸಿರುವ ಹಲವು ಚಿತ್ರಗಳು ಬಿಡುಗಡೆಯಾಗುತ್ತಿವೆ. ಆ ಸಾಲಿಗೆ ಇದೀಗ ‘ಕರಿಕಾಡ’ ಎಂಬ ಚಿತ್ರ ಸಹ ಸೇರಿದೆ. ಈ ಚಿತ್ರದ ಮೂಲಕ ಕಾಡ ನಟರಾಜ್‍ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರದ ಟೀಸರ್ ಇತ್ತೀಚೆಗೆ MRT Music ಚಾನಲ್‍ನಲ್ಲಿ ಬಿಡುಗಡೆಯಾಗಿದೆ. ಸಂತೋಷ್‍ ಆನಂದರಾಮ್‍ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

‘ಕರಿಕಾಡ’ ಚಿತ್ರವನ್ನು ರಿದ್ಧಿ ಎಂಟರ್‌ಟೇನ್‍ಮೆಂಟ್ಸ್ ಬ್ಯಾನರ್ ಅಡಿ ನಟರಾಜ್‍ ಪತ್ನಿ ದೀಪ್ತಿ ದಾಮೋದರ್ ನಿರ್ಮಿಸುತ್ತಿದ್ದಾರೆ. ಗಿಲ್ಲಿ ವೆಂಕಟೇಶ್‍ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಅತಿಶಯ್‍ ಜೈನ್ ಸಂಗೀತ ಸಂಯೋಜಿಸಿದರೆ, ಶಶಾಂಕ್‍ ಶೇಷಗಿರಿ ಹಿನ್ನೆಲೆ ಸಂಗೀತವಿದೆ.

‘ಕರಿಕಾಡ’ ಎಂದರೇನು? ಈ ಪ್ರಶ್ನೆಗೆ ಉತ್ತರಿಸುವ ನಿರ್ದೇಶಕ ಗಿಲ್ಲಿ ವೆಂಕಟೇಶ್‍, ಕರಿ ಎಂದರೆ ಆನೆ, ಕಾಡ ಎಂದರೆ ನಾಯಕನ ಹೆಸರು. ಇಲ್ಲಿ ನಾಯಕ ಕಾಡುಹಂದಿ ಬೇಟೆ ಆಡುತ್ತಿರುತ್ತಾನೆ. ಮದ್ದಾನೆ ತರಹದ ಪಾತ್ರ ಅವನದು. ಮದ ಹಿಡಿದ ಆನೆಯನ್ನು ಹಿಡಿಯುವುದು ಎಷ್ಟು ಕಷ್ಟವೋ, ಅದೇ ರೀತಿ ಅವನನ್ನು ಹಿಡಿಯುವುದು ಅಷ್ಟೇ ಕಷ್ಟ’ ಎಂದರು.

ಇದಕ್ಕೂ ಮೊದಲು ಗಿಲ್ಲಿ ವೆಂಕಟೇಶ್‍, ‘ತಾಲಟ್ಟಿ’ ಎಂಬ ಹಾರರ್ ಚಿತ್ರ ಮಾಡಿದ್ದರಂತೆ. ಅದು ಇನ್ನೂ ಬಿಡುಗಡೆ ಆಗದಿರುವುದರಿಂದ, ‘ಕರಿಕಾಡ’ ಅವರ ಮೊದಲ ಚಿತ್ರವೆನ್ನಬಹುದು. ಕಾಡಿನಲ್ಲೇ ಹೆಚ್ಚಾಗಿ ಕಥೆ ಸಾಗುವುದರಿಂದ ಈ ಚಿತ್ರಕ್ಕೆ ಕಳಸ, ಚಿಕ್ಕಮಗಳೂರು, ಬೆಂಗಳೂರು ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆಯಂತೆ. ನಾಯಕ ಕೆಲಸ ಮಾಡುತ್ತಿರುವುದರಿಂದ, ಶನಿವಾರ ಮತ್ತು ಭಾನುವಾರಗಳ ಜೊತೆಗೆ ರಜಾದಿನಗಳಲ್ಲಿ ಚಿತ್ರೀಕರಣ ನಡೆಸಲಾಗಿದೆಯಂತೆ.

ಚಿತ್ರದ ನಾಯಕಿ ಯಾರು? ಎಂಬ ಪ್ರಶ್ನೆಗೆ ಉತ್ತರಿಸದ ಅವರು, ‘ಚಿತ್ರದಲ್ಲಿ ನಾಯಕಿಗೂ ಒಂದು ಪ್ರಮುಖ ಪಾತ್ರವಿದೆ. ಸದ್ಯಕ್ಕೆ ಅವರನ್ನು ಪರಿಚಯಿಸಿಲ್ಲ. ನಾಯಕನ ತರಹ ನಾಯಕಿಗೂ ಒಂದು ಟೀಸರ್ ಮಾಡಿ ಪರಿಚಯಿಸಲಾಗುತ್ತದೆ. ಚಿತ್ರ ಸಂಪೂರ್ಣವಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಆಗಲಿದೆ. ಇದೇ ವರ್ಷ ಚಿತ್ರ ಬಿಡುಗಡೆ ಆಗುತ್ತದೆ’ ಎಂದರು.

ಕಾಡ ನಟರಾಜ್‍, ಬಿಗ್‍ ಬಾಸ್ಕೆಟ್‍ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರಂತೆ. ‘ಕೆಲಸದ ಜೊತೆಗೆ ಬೇರೆ ಏನಾದರೂ ಮಾಡಬೇಕು ಅನಿಸುತ್ತಿತ್ತು. ಮೊದಲಿನಿಂದಲೂ ನಟನೆಯ ಬಗ್ಗೆ ಆಸಕ್ತಿ ಇತ್ತು. ಹಾಗಾಗಿ ಕೆಲಸದ ಜೊತೆಗೆ ಈ ಚಿತ್ರ ಮಾಡಿದೆ. ವೀಕೆಂಡ್‍ ಮತ್ತು ರಜಾ ದಿನಗಳಲ್ಲಿ ಚಿತ್ರೀಕರಣ ಮಾಡಿ ಮುಗಿಸಿದ್ದೇವೆ. ಸುಮಾರು 60 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣವನ್ನು ಸತತವಾಗಿ 48 ಗಂಟೆಗಳ ಕಾಲ ಮಾಡಿದ್ದೇವೆ’ ಎಂದರು.

‘ಕರಿಕಾಡ’ ಚಿತ್ರದಲ್ಲಿ ನಟರಾಜ್ ಜೊತೆಗೆ ಯಶ್‍ ಶೆಟ್ಟಿ, ಬಲ ರಾಜವಾಡಿ, ವಿಜಯ್‍ ಚೆಂಡೂರ್, ಕರಿಸುಬ್ಬು, ಚಂದ್ರಪ್ರಭಾ, ರಾಕೇಶ್‍ ಪೂಜಾರಿ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಜೀವನ್‍ ಗೌಡ ಛಾಯಾಗ್ರಹಣವಿದೆ.

Tags:
error: Content is protected !!