ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಒಂದಾಗಿರುವ ಗೋವಾದಲ್ಲಿ ನಡೆಯುವ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ (IFFI) ಕನ್ನಡದಿಂದ ‘ಕೆರೆಬೇಟೆ’ ಮತ್ತು ‘ವೆಂಕ್ಯಾ’ ಚಿತ್ರಗಳು ಆಯ್ಕೆಯಾಗಿವೆ.
ಗೋವಾದ ಪಣಜಿಯಲ್ಲಿ ನಡೆಯುವ 55ನೇ ಭಾರತೀಯ ಅಂತರಾಷ್ಟ್ರೀಯ ಚಿತ್ರೋತ್ಸವವು ನವೆಂಬರ್.20ರಿಂದ 28ರವರೆಗೂ ನಡೆಯಲಿದೆ. ಈ ಚಿತ್ರೋತ್ಸವಕ್ಕೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಅನೇಕ ಸಿನಿ ಗಣ್ಯರು ಸಾಕ್ಷಿಯಾಗಲಿದ್ದಾರೆ.
ಈ ಬಾರಿ ಪನೋರಮ ವಿಭಾಗಕ್ಕೆ 25 ಚಲನಚಿತ್ರಗಳು ಮತ್ತು 20 ಸಾಕ್ಷ್ಯಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಭಾರತೀಯ ಪನೋರಮ ವಿಭಾಗದ ಆರಂಭಿಕ ಸಿನಿಮಾವಾಗಿ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಹಿಂದಿ ಚಿತ್ರವನ್ನು ಆಯ್ಕೆ ಮಾಡಲಾಗಿದೆ. ಇನ್ನು ಎರಡನೇ ಚಿತ್ರವಾಗಿ ಕನ್ನಡದ ‘ಕೆರೆಬೇಟೆ’ ಆಯ್ಕೆಯಾಗಿದೆ. ಇನ್ನೊಂದು ಚಿತ್ರವಾಗಿ ಪವನ್ ಒಡೆಯರ್ ನಿರ್ಮಾಣದ ಮತ್ತು ಸಾಗರ್ ಪುರಾಣಿಕ್ ನಟನೆ ಮತ್ತು ನಿರ್ದೇಶನದ ‘ವೆಂಕ್ಯಾ’ ಚಿತ್ರವು ಪ್ರದರ್ಶನವಾಗಲಿದೆ.
‘ಕೆರೆಬೇಟೆ’ ಚಿತ್ರವು ಮಾರ್ಚ್.15ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಜನಮನ ಸಿನಿಮಾ ಸಂಸ್ಥೆಯಲ್ಲಿ ಮೂಡಿ ಬಂದಿದ್ದ ಚಿತ್ರದಲ್ಲಿ ಗೌರಿಶಂಕರ್, ಬಿಂದು ಶಿವರಾಂ, ಗೋಪಾಲಕೃಷ್ಣ ದೇಶಪಾಂಡೆ, ಹರಣಿ ಮುಂತಾದವರು ನಟಿಸಿದ್ದು, ರಾಜ್‍ಗುರು ಈ ಚಿತ್ರವನ್ನು ನಿರ್ದೇಶಿಸಿದ್ದರು.
ಇನ್ನು, ‘ವೆಂಕ್ಯಾ’ ಚಿತ್ರವನ್ನು ಪವನ್ ಒಡೆಯರ್ ತಮ್ಮ ಒಡೆಯರ್ ಮೂವೀಸ್ ಸಂಸ್ಥೆಯಡಿ ನಿರ್ಮಿಸಿದರೆ, ಸಾಗರ್ ಪುರಾಣಿಕ್ ನಿರ್ದೇಶನ ಮಾಡುವುದರ ಜೊತೆಗೆ ಚಿತ್ರದಲ್ಲಿ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಸಾಗರ್‌ಗೆ ಜೋಡಿಯಾಗಿ ಶಿಮ್ಲಾದ ರೂಪಾಲಿ ಸೂದ್ ಅಭಿನಯಿಸಿದ್ದಾರೆ.
‘ಕೆರೆಬೇಟೆ’ ಮತ್ತು ‘ವೆಂಕ್ಯಾ’ ಚಿತ್ರಗಳಲ್ಲದೆ, ಮಲಯಾಳಂ, ತಮಿಳು, ಮರಾಠಿ, ಬೆಂಗಾಲಿ, ತೆಲುಗು ಭಾಷೆಗಳ ಕೆಲವು ಜನಪ್ರಿಯ ಸಿನಿಮಾಗಳು ಈ ಪನೋರಮ ವಿಭಾಗದಲ್ಲಿ ಪ್ರದರ್ಶನ ಕಾಣಲಿವೆ.