Mysore
27
broken clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಅಚ್ಯುತ್‍ ಕುಮಾರ್ ಮಗಳ ಪಾತ್ರದಲ್ಲಿ ಶರಣ್ಯ: ಕೌಂತೇಯ ಚಿತ್ರಕ್ಕೆ ಚಾಲನೆ

kantheyaaaa

‘ಕೃಷ್ಣಂ ಪ್ರಣಯ ಸಖಿ’, ‘ಫಾರೆಸ್ಟ್’ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಶರಣ್ಯ ಶೆಟ್ಟಿ, ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರದ ಭಾಗವಾಗಿದ್ದಾರೆ. ಈ ಬಾರಿ ಅವರು ‘ಕೌಂತೇಯ’ ಚಿತ್ರದಲ್ಲಿ ಅಚ್ಯುತ್ ಕುಮಾರ್ ಮಗಳಾಗಿ ನಟಿಸುತ್ತಿದ್ದು, ಈ ಚಿತ್ರದ ಮುಹೂರ್ತ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನಡೆದಿದೆ.

ಹೆಸರು ಕೇಳಿದರೆ ಇದೊಂದು ಪೌರಾಣಿಕ ಚಿತ್ರ ಎಂದನಿಸಬಹುದು. ಏಕೆಂದರೆ, ‘ಕೌಂತೇಯ’ ಎಂದರೆ ಮಹಾಭಾರತದ ಕರ್ಣನ ಇನ್ನೊಂದು ಹೆಸರು. ಹಾಗಂತ ಇದು ಪೌರಾಣಿಕ ಚಿತ್ರವಲ್ಲ, ಇದೊಂದು ಕ್ರೈಂ ಸ್ಟೋರಿಯಂತೆ. ಕಥೆಗೆ ಇದೇ ಹೆಸರು ಸೂಕ್ತ ಎಂದು ಈ ಹೆಸರು ಇಡಲಾಗಿದೆ.

‘ಕೌಂತೇಯ’ ಚಿತ್ರವನ್ನು ಮಹಾಕಾಳಿ ಪಿಕ್ಚರ್ಸ್ ಬ್ಯಾನರ್ ಅಡಿ ಸುರೇಶ್‍ ಕುಮಾರ್ ನಿರ್ಮಿಸುತ್ತಿದ್ದು, ಬಿ.ಕೆ. ಚಂದ್ರಹಾಸ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಬಿಗ್ ಬಾಸ್’ ನೀತು ಕೂಡ ಈ ಚಿತ್ರದಲ್ಲಿ ಒಬ್ಬ ಮಹಿಳಾ ಪೊಲೀಸ್ ಪಾತ್ರ ಮಾಡುತ್ತಿದ್ದಾರೆ. ಸುರೇಶ್‍ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಪಿ.ಎಲ್. ರವಿ ಛಾಯಾಗ್ರಹಣ, ಬಿ.ಜೆ.ಭರತ್ ಹಿನ್ನೆಲೆ ಸಂಗೀತವಿದೆ.

ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಚಂದ್ರಹಾಸ, ‘ಇದೊಂದು ಮರ್ಡರ್ ಮಿಸ್ಟ್ರಿ ಕುರಿತಾದ ಚಿತ್ರ. ಜೂನ್.೯ರಿಂದ ಮೊದಲ ಹಂತದ ಚಿತ್ರೀಕರಣ ಮಾಡುತ್ತಿದ್ದೇವೆ. ಬೆಂಗಳೂರು ಹಾಗೂ ಮೈಸೂರಿನಲ್ಲೇ ಬಹುತೇಕ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಹಾಡುಗಳಿಲ್ಲ. ಹಿನ್ನೆಲೆ ಸಂಗೀತ ಪ್ರಮುಖ ಪಾತ್ರ ವಹಿಸುತ್ತದೆ’ ಎಂದರು.

ಅಚ್ಯುತ್ ಕುಮಾರ್ ಈ ಚಿತ್ರದಲ್ಲಿ ರಂಗನಾಥ ಎಂಬ ನಿವೃತ್ತಿಯ ಅಂಚಿನಲ್ಲಿರುವ ಸಬ್ ಇನ್ಸ್ ಪೆಕ್ಟರ್ ಪಾತ್ರ ಮಾಡುತ್ತಿದ್ದಾರಂತೆ. ‘ಕರ್ತವ್ಯದ ಕೊನೆಯ ದಿನಗಳಲ್ಲಿ ಆತ ಎದುರಿಸುವ ರೋಚಕ ಕೇಸ್ ಒಂದರ ಕಥೆಯಿದು. ಕಡೆಯ ದಿನಗಳಲ್ಲಿ ಆತ ಈ ಕೊಲೆ ಕೇಸಿನ ಜತೆಗೆ ಏನೇನು ಸವಾಲುಗಳನ್ನು ಎದುರಿಸುತ್ತಾನೆ ಎಂಬುದನ್ನು ಥ್ರಿಲ್ಲಿಂಗ್ ಆಗಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ’ ಎಂದರು.

ಶರಣ್ಯ ಶೆಟ್ಟಿ ಇದೇ ಮೊದಲ ಬಾರಿಗೆ ಪತ್ರಕರ್ತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಅಚ್ಯುತ್ ಕುಮಾರ್ ಅವರ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇಲ್ಲಿ ನಾನೊಬ್ಬ ಕ್ರೈಮ್ ರಿಪೋರ್ಟರ್ ಅಗಿ ನಟಿಸುತ್ತಿದ್ದು, ತುಂಬಾ ಗಟ್ಟಿ ಮತ್ತು ಬೋಲ್ಡ್ ಆದ ಪಾತ್ರ ನನ್ನದು. ಜತೆಗೆ ತಂದೆ ಮಗಳ ನಡುವಿನ ಬಾಂಧವ್ಯ ಸಹ ಇರುತ್ತದೆ’ ಎಂದರು.

Tags:
error: Content is protected !!