‘ಚುಟುಚುಟು ಅಂತೈತಿ…’ ಹಾಡಿನ ನಂತರ ಕನ್ನಡದಲ್ಲಿ ಉತ್ತರ ಕರ್ನಾಟಕ ಸೊಗಡಿನ ಹಾಡುಗಳ ಸಂಖ್ಯೆ ಹೆಚ್ಚಾಗಿದೆ. ಈಗ ‘ಸೂರ್ಯ’ ಎಂಬ ಹೊಸ ಚಿತ್ರದಲ್ಲೂ ‘ಕೆಂಪಾನ ಗಲ್ಲದ ಹುಡುಗಿ…’ ಎಂಬ ಉತ್ತರ ಕರ್ನಾಟಕ ಶೈಲಿಯ ಹಾಡು ಹಾಡಿದ್ದು, ಈ ಹಾಡನ್ನು ರವೀಂದ್ರ ಸೊರಗಾಂವಿ ಮತ್ತು ಸ್ಫೂರ್ತಿ ಹಾಡಿದ್ದಾರೆ. ಈ ಹಾಡು ಇತ್ತೀಚೆಗೆ ಬಿಡುಗಡೆ ಆಗಿದೆ.
ಬೆಳಗಾವಿ ಮೂಲದ ಬಸವರಾಜ ಬೆಣ್ಣೆ ಹಾಗೂ ರವಿ ಬೆಣ್ಣೆ, ನಂದಿ ಸಿನಿಮಾಸ್ ಮೂಲಕ ನಿರ್ಮಿಸುತ್ತಿರುವ ‘ಸೂರ್ಯ’ ಚಿತ್ರವನ್ನು ಸಾಗರ್ ದಾಸ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರಶಾಂತ್ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಹರ್ಷಿತಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಯುವಕನೊಬ್ಬ ತನ್ನ ಪ್ರೀತಿಯನ್ನು ಪಡೆದುಕೊಳ್ಳಲು ಏನೆಲ್ಲಾ ಹೋರಾಟ, ಸಾಹಸ ಮಾಡುತ್ತಾನೆ ಎಂಬುದನ್ನು ಈ ಚಿತ್ರದ ಮೂಲಕ ಸಾಗರ್ ದಾಸ್ ಹೇಳಲು ಹೊರಟಿದ್ದಾರಂತೆ. ಬಿ. ಸುರೇಶ್ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅನುಭವವಿರುವ ಸಾಗರ್ ದಾಸ್‍ಗೆ ಇದು ಮೊದಲ ಚಿತ್ರ. ‘ಸೂರ್ಯ ಎನ್ನುವುದು ಇಲ್ಲಿ ನಾಯಕನ ಹೆಸರು. ಆತ ತನ್ನ ಪ್ರೀತಿಗೋಸ್ಕರ ಸಮರ ಸಾರಿ ಅದನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಕಥಾಹಂದರ. ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಲೇ ನಾನೊಂದು ಕಥೆ ಮಾಡಿಕೊಂಡಿದ್ದೆ. ನನ್ನ ಸ್ನೇಹಿತನ ಮೂಲಕ ನಿರ್ಮಾಪಕರ ಪರಿಚಯವಾಗಿ, ಅವರಿಗೆ ಈ ಕಥೆ ಹೇಳಿದಾಗ ಇಷ್ಟಪಟ್ಟು ಚಿತ್ರ ನಿರ್ಮಾಣಕ್ಕೆ ಮುಂದಾದರು. ಬೆಂಗಳೂರು ಸುತ್ತಮುತ್ತ ಹಾಗೂ ಪೂನಾದಲ್ಲಿ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ. ಜೂನ್ ಅಥವಾ ಜುಲೈ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ. ಆರ್ಮುಗಂ ರವಿಶಂಕರ್ ಅವರನ್ನು ಇದುವರೆಗೂ ನೋಡಿರದಂಥ ಪಾತ್ರದಲ್ಲಿ ಕಾಣಬಹುದು. ಶ್ರುತಿ ವೈದ್ಯೆಯಾಗಿ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ ಅವರಿಲ್ಲಿ ಉತ್ತರ ಕರ್ನಾಟಕ ಭಾಗದ ವಿಲನ್ ಪಾತ್ರ ನಿರ್ವಹಿಸಿದ್ದಾರೆ’ ಎಂದು ಮಾಹಿತಿ ನೀಡಿದರು.
ಚಿತ್ರದ ಐದು ಹಾಡುಗಳಿಗೆ ಶ್ರೀ ಶಾಸ್ತ್ರಿ ಅವರು ಸಂಗೀತ ಸಂಯೋಜನೆ ಮಾಡಿದರೆ, ಮನುರಾಜ್ ಛಾಯಾಗ್ರಹಣವಿದೆ.



