ಇತಿಹಾಸಕಾರರು ಹೇಳಿದ್ದನ್ನೇ ನಾನು ಹೇಳಿದ್ದೇನೆ, ಯಾವುದೇ ತಪ್ಪು ಮಾಹಿತಿ ನೀಡಿಲ್ಲ. ಕ್ಷಮೆ ಕೇಳುವಂತದ್ದು ನಾನೇನು ಹೇಳಿಲ್ಲ ಎಂದಿರುವ ನಟ ಕಮಲ್ ಹಾಸನ್, ಈ ಮೂಲಕ ತಾವು ಕ್ಷಮೆ ಕೇಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಇತ್ತೀಚೆಗೆ, ಚೆನ್ನೈನಲ್ಲಿ ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕನ್ನಡದ ಶಿವರಾಜಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಡಾ. ರಾಜಕುಮಾರ್ ಮತ್ತು ಶಿವರಾಜಕುಮಾರ್ ಅವರೊಂದಿಗಿನ ಒಡನಾಟದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ, ‘ಕನ್ನಡವು ತಮಿಳಿನಿಂದ ಹುಟ್ಟಿತು …’ ಎಂಬ ಹೇಳಿಕೆಯನ್ನು ನೀಡಿದ್ದರು.
ಈ ಹೇಳಿಕೆ ಸಾಕಷ್ಟು ವಿವಾದಕ್ಕೀಡಾಗುವುದರ ಜೊತೆಗೆ, ತಮಿಳು ಭಾಷೆಯು ಕನ್ನಡಕ್ಕಿಂತ ಶ್ರೇಷ್ಠ ಎಂಬ ಭಾವನೆಯನ್ನು ಕಮಲ್ ಹಾಸನ್ ಬಿತ್ತುವುದಕ್ಕೆ ಹೊರಟಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಚಿವ ಶಿವರಾಜ ತಂಗಡಗಿ ಸೇರಿದಂತೆ ಹಲವರು ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಿದ್ದರು. ಕಮಲ್ ಹಾಸನ್ ಕ್ಷಮೆ ಕೇಳದಿದ್ದರೆ, ಮುಂದಿನ ವಾರ ಬಿಡುಗಡೆಯಾಗಬೇಕಿರುವ ಅವರ ‘ಥಗ್ ಲೈಫ್’ ಚಿತ್ರವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದ್ದರು.
ಇಷ್ಟೆಲ್ಲಾ ಟೀಕೆಗಳು ವ್ಯಕ್ತವಾದರೂ, ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ. ತಿರುವನಂತಪುರದಲ್ಲಿ ಬುಧವಾರ ಈ ಕುರಿತು ಮಾತನಾಡಿರುವ ಅವರು, ‘ಇತಿಹಾಸಕಾರರು ಹೇಳಿದ್ದನ್ನೇ ನಾನು ಹೇಳಿದ್ದೇನೆ, ಯಾವುದೇ ತಪ್ಪು ಮಾಹಿತಿ ನೀಡಿಲ್ಲ. ಕ್ಷಮೆ ಕೇಳುವಂತದ್ದು ನಾನೇನು ಹೇಳಿಲ್ಲ. ತಮಿಳುನಾಡು ರಾಜ್ಯವು ಎಲ್ಲಾ ಭಾಷಿಕರಿಗೂ ಗೌರವ ನೀಡಿದೆ. ಕೇರಳದ ಮೆನನ್, ಆಂಧ್ರದ ರೆಡ್ಡಿ ಹಾಗೂ ಕರ್ನಾಟಕದ ಅಯ್ಯಂಗಾರ್ ಸಮುದಾಯದ ಮಹಿಳೆಯೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕನ್ನಡಿಗರು ನನಗೆ ತುಂಬಾ ಪ್ರೀತಿಯನ್ನು ನೀಡಿದ್ದಾರೆ. ತಮಿಳುನಾಡಿನಲ್ಲಿ ಸಮಸ್ಯೆಯಾದಾಗ ಕನ್ನಡದಲ್ಲಿ ಸಾಕಷ್ಟು ಅವಕಾಶ ನೀಡಿದ್ದಾರೆ. ಪ್ರೀತಿಯಲ್ಲಿ ಕ್ಷಮೆಯ ಮಾತು ಬರುವುದಿಲ್ಲ’ ಎಂದು ಹೇಳಿದ್ದಾರೆ.





