Mysore
27
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

‘ಬಿಗ್‍ ಬಾಸ್‍’ ಕಾರ್ಯಕ್ರಮಕ್ಕೆ ಕಮಲ್‍ ಹಾಸನ್‍ ವಿದಾಯ

ಒಂದು ಕಡೆ ಕನ್ನಡದ ‘ಬಿಗ್‍ ಬಾಸ್’ ಕಾರ್ಯಕ್ರಮವನ್ನು ಸುದೀಪ್‍ ನಡೆಸಿಕೊಡುತ್ತಾರೋ ಇಲ್ಲವೋ ಎಂಬ ಚರ್ಚೆ ನಡೆಯುತ್ತಿರುವಾಗಲೇ, ಅತ್ತ ತಮಿಳಿನಲ್ಲಿ ಹಿರಿಯ ನಟ ಕಮಲ್‍ ಹಾಸನ್‍, ಈ ಬಾರಿ ಕಾರ್ಯಕ್ರಮ ನಡೆಸಿಕೊಡುತ್ತಿಲ್ಲ, ತಮ್ಮ ಬದಲಿಗೆ ಬೇರೆಯವರು ನಿರೂಪಣೆ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

2017ರಲ್ಲಿ ಸ್ಟಾರ್‍ ವಿಜಯ್‍ ಚಾನಲ್‍ನಲ್ಲಿ ಕಮಲ್‍ ಹಾಸನ್‍ ಅವರ ನಿರೂಪಣೆಯಲ್ಲಿ ಈ ಕಾರ್ಯಕ್ರಮ ಪ್ರಾರಂಭವಾಗಿತ್ತು. ಕಾರ್ಯಕ್ರಮವು ಅತ್ಯಂತ ಯಶಸ್ವಿಯೂ ಆಗಿತ್ತು. ಇದುವರೆಗಿ ಏಳು ಸೀಸನ್‍ಗಳನ್ನು ಕಮಲ್‍ ಹಾಸನ್‍ ನಡೆಸಿಕೊಟ್ಟಿದ್ದರು. ಈಗ ಎಂಟನೆಯ ಅವತರಣಿಕೆಯನ್ನು ನಡೆಸಿಕೊಡುತ್ತಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪತ್ರ ಬರೆದಿರುವ ಅವರು, ಕಾರ್ಯಕ್ರಮದಿಂದ ಬ್ರೇಕ್ ಪಡೆಯುತ್ತಿರುವುದಾಗಿ ಹೇಳಿದ್ದಾರೆ.

‘ಭಾರದ ಹೃದಯದಿಂದ, ಈ ಬಾರಿಯ ‘ಬಿಗ್‍ ಬಾಸ್’ ಕಾರ್ಯಕ್ರಮವನ್ನು ನಡೆಸಿಕೊಡುವುದಕ್ಕೆ ಆಗುತ್ತಿಲ್ಲ, ಒಂದು ಬ್ರೇಕ್‍ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳುವುದಕ್ಕೆ ವಿಷಾಧಿಸುತ್ತಿದ್ದೇನೆ. ಕೆಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವುದರಿಂದ, ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಏಳು ವರ್ಷಗಳ ಕಾಲ ‘ಬಿಗ್ ಬಾಸ್‍’ ಕಾರ್ಯಕ್ರಮದ ಮೂಲಕ ನಿಮ್ಮೆಲ್ಲರ ಮನೆಗಳಿಗೆ ಬರುವ ಅವಕಾಶ ಸಿಕ್ಕಿತ್ತು. ಇದರಿಂದ ಸಾಕಷ್ಟು ಪ್ರೀತಿಯೂ ಸಿಕ್ಕಿದ್ದು, ಇದಕ್ಕೆ ಚಿರಋಣಿಯಾಗಿದ್ದೇನೆ. ಈ ಕಾರ್ಯಕ್ರಮ ನಡೆಸಿಕೊಡುವುದು ಒಂದು ಅದ್ಭುತ ಅನುಭವವಾಗಿದ್ದು, ಇಂಥದ್ದೊಂದು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳನ್ನು ಹೇಳುವುದಕ್ಕೆ ಬಯಸುತ್ತೇನೆ’ ಎಂದು ಹೇಳಿದ್ದಾರೆ.

ಸರಿ, ಕಮಲ್‍ ಹಾಸನ್‍ ಬಿಟ್ಟು ಹೋದ ಜಾಗವನ್ನು ಯಾರು ತುಂಬಲಿದ್ದಾರೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ಮಧ್ಯೆ, ನಟ ಸೂರ್ಯ, ವಿಜಯ್‍ ಸೇತುಪತಿ, ನಯನತಾರಾ, ರಮ್ಯಾ ಕೃಷ್ಣನ್‍ ಮುಂತಾದವರ ಹೆಸರುಗಳು ಕೇಳಿಬಂದಿತ್ತು. ಇದೀಗ ಬಂದಿರುವ ಸುದ್ದಿಯ ಪ್ರಕಾರ, ಹಿರಿಯ ನಟ ಶರತ್‍ ಕುಮಾರ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Tags:
error: Content is protected !!