ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಬಿಡುಗಡೆಯಾಗಿ ಎರಡು ವಾರಗಳಾಗಿವೆ. ಚಿತ್ರ ಬಿಡಗುಡೆಯಾಗಿ 13ನೇ ದಿನದ ಅಂತ್ಯಕ್ಕೆ ಚಿತ್ರವು ಜಗತ್ತಿನಾದ್ಯಂತ 1000 ಕೋಟಿ ರೂ. ಗಳಿಕೆ ಮಾಡುವ ಮೂಲಕ 1000 ಕೋಟಿ ರೂ. ಕ್ಲಬ್ ಸೇರಿದೆ.
ನಟ ಪ್ರಭಾಸ್‍ಗೆ ಸಾವಿರ ಕೋಟಿ ಕ್ಲಬ್ ಹೊಸದೇನಲ್ಲ. ಈ ಹಿಂದೆ, ಅವರ ‘ಬಾಹುಬಲಿ’ ಚಿತ್ರವು ಸಾವಿರ ಕೋಟಿ ಕ್ಲಬ್‍ಗೆ ಹೋಗಿತ್ತು. 250 ಕೋಟಿ ರೂ. ಬಜೆಟ್‍ನಲ್ಲಿ ನಿರ್ಮಾಣವಾದ ಚಿತ್ರವು ಜಗತ್ತಿನಾದ್ಯಮತ 1,810 ಕೋಟಿ ರೂ. ಸಂಗ್ರಹಿಸಿತ್ತು. ಈಗ 600 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ‘ಕಲ್ಕಿ 2898 ಎಡಿ’ 1000 ಕೋಟಿ ರೂ. ಸಂಗ್ರಹಿಸಿದೆ. ಈ ಚಿತ್ರವು ಇನ್ನೂ 200-300 ಕೋಟಿ ರೂ. ಸಂಗ್ರಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಚಿತ್ರವು ಮೊದಲ ದಿನವೇ 200 ಕೋಟಿ ರೂ. ಸಂಗ್ರಹಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಅದಕ್ಕೆ ಸರಿಯಾಗಿ ಮೊದಲ ದಿನವು 191 ಕೋಟಿ ರೂ ಜಾಗತಿಕವಾಗಿ ಗಳಿಕೆ ಮಾಡಿತ್ತು. ಆ ನಂತರ ಕ್ರಮೇಣ ಗಳಿಕೆ ಕಡಿಮೆಯಾದರೂ ಒಟ್ಟಾರೆ, ಚಿತ್ರ ಬಿಡುಗಡೆಯಾದ 16ನೇ ದಿನಕ್ಕೆ ಚಿತ್ರವು 1000 ಕೋಟಿ ರೂ ಸಂಗ್ರಹ ಮಾಡಿದೆ.
ಈ ಚಿತ್ರಕ್ಕೆ ನಾಗ್ ಅಶ್ವಿನ್ ಅವರೇ ಕಥೆ-ಚಿತ್ರಕಥೆ ರಚಿಸಿದ್ದಾರೆ. ಪುರಾಣ ಮತ್ತು ಸೈನ್ಸ್ ಫಿಕ್ಷನ್ ಆಧರಿಸಿ ಮಾಡಲಾದ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಮಿತಾಭ್ ಬಚ್ಚನ್ ಅವರು ಚಿತ್ರದಲ್ಲಿ ಅಶ್ವತ್ಥಾಮನ ಪಾತ್ರ ಮಾಡಿದರೆ, ಕರ್ಣ ಮತ್ತು ಭೈರವನಾಗಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ದುಲ್ಕರ್ ಸಲ್ಮಾನ್, ವಿಜಯ್ ದೇವರಕೊಂಡ, ಮೃಣಾಲ್ ಠಾಕೂರ್ ಮುಂತಾದವರು ಈ ಚಿತ್ರದಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
‘ಕಲ್ಕಿ 2898 AD’ ಚಿತ್ರದಲ್ಲಿ ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್ ಅಡಿ ಅಶ್ವಿನಿ ದತ್ ನಿರ್ಮಿಸಿದ್ದಾರೆ.