ಉಡುಪಿ: ಶ್ರಾವಣ ಶನಿವಾರದ ಪ್ರಯುಕ್ತ ಇಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ತೆಲುಗು ಚಿತ್ರರಂಗದ ಖ್ಯಾತ ನಟ ಜ್ಯೂನಿಯರ್ ಎನ್‌ಟಿಆರ್ ಭೇಟಿ ನೀಡಿ, ಶ್ರೀಕೃಷ್ಣನ ದರ್ಶನ ಪಡೆದರು.
ತಾಯಿ ಶಾಲಿನಿ ನಂದಾಮೂರಿ ಅವರೊಂದಿಗೆ ಉಡುಪಿಗೆ ಭೇಟಿ ನೀಡಿದ್ದ ಜ್ಯೂನಿಯರ್ ಎನ್‌ಟಿಆರ್ ಅವರು, ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ,, ಕೋಟಿಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕರಿಸಿದರು.
ಶಾಲಿನಿ ನಂದಮೂರಿ ಅವರು ಸುಮಾರು 40 ವರ್ಷಗಳ ಹಿಂದೆ ಪುತ್ರನನ್ನು ಉಡುಪಿ ಶ್ರೀಕೃಷ್ಣ ದೇವರ ದರ್ಶನಕ್ಕೆ ಕರೆದುಕೊಂಡು ಬರಬೇಕು ಎಂಬ ಕನಸು ಕಂಡಿದ್ದರು. ಈ ಬಗ್ಗೆ ಅವರೇ ಹೇಳಿಕೆ ನೀಡಿದ್ದರು. ಇದೀಗ ಈ ಕನಸು ನೆರವೇರಿದೆ ಎಂದು ಮಠದ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ.
ನನ್ನ ತಾಯಿ ಮೂತಹಃ ಕುಂದಾಪುರದವರಾಗಿದ್ದು, ನನ್ನ ತಾಯಿ ಕನ್ನಡತಿ ಎಂದು ಹಲವು ಬಾರಿ ಜ್ಯೂನಿಯರ್ ಎನ್‌ಟಿಆರ್ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಹುಟ್ಟೂರಿಗೆ ಆಗಮಿಸಿ ಶ್ರೀಕೃಷ್ಣನ ದರ್ಶನ ಪಡೆದು ತಾಯಿಯ ಆಸೆ ಈಡೇರಿಸಿದ್ದಾರೆ.
ಜ್ಯೂನಿಯರ್ ಎನ್‌ಟಿಆರ್‌ಗೆ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಹಲವರು ಸಾಥ್ ನೀಡಿದರು.