ಇತ್ತೀಚೆಗೆ ಕಾಶ್ಮೀರದ ಪೆಹಲ್ಗಾಮ್‍ನಲ್ಲಿ ನಡೆದ ಭಯೋತ್ಪಾದಕ ದಾಳಿ ಕುರಿತು ಹಲವು ಸೆಲೆಬ್ರಿಟಿಗಳು ಖಂಡಿಸಿದ್ದಾರೆ. ಶಿವರಾಜಕುಮಾರ್, ಯಶ್, ಧ್ರುವ ಸರ್ಜಾ ಮುಂತಾದವರು ಈಗಾಗಲೇ ಖಂಡಿಸಿದ್ದಾರೆ. ಈ ದಾಳಿಯಲ್ಲಿ ಮೃತರಾದವರಿಗೆ ಸಂತಾಪ ಸೂಚಿಸಿದ್ದಾರೆ. ಈಗ ನಟ-ನಿರ್ದೇಶಕ ‘ಜೋಗಿ’ ಪ್ರೇಮ್, ಈ ದಾಳಿಯನ್ನು ಖಂಡಿಸುವುದರ ಜೊತೆಗೆ, ಉಗ್ರರನ್ನು ಕತ್ತರಿಸಿ ಪೀಸ್ ಪೀಸ್ ಮಾಡಿ ಎಸೆಯಬೇಕು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ನಮ್ಮ ಮೇಲೆ ಯುದ್ಧ ಸಾರಲು ಬಂದವರ ವಿರುದ್ಧ ಯುದ್ಧ ಮಾಡಲೇಬೇಕು ಎಂದು ಹೇಳಿದ್ದಾರೆ.
ಸೋಮವಾರ ಸಂಜೆ, ‘ನಾನು ಮತ್ತು ಗುಂಡ 2’ ಚಿತ್ರದ ಹಾಡು ಬಿಡುಗಡೆ ಮಾಡುವುದಕ್ಕೆ ಬಂದಿದ್ದ ಪ್ರೇಮ್, ಈ ಸಂದರ್ಭದಲ್ಲಿ ಪೆಹಲ್ಗಾಮ್ ದಾಳಿಯ ಕುರಿತು ಹಲವು ವಿಷಯಗಳನ್ನು ಮಾತನಾಡಿದ್ದಾರೆ. ಉಗ್ರರಿಗೆ ಯಾವುದೇ ಸೆಂಟಿಮೆಂಟ್ ತೋರಿಸಬಾರದು ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ಸೆಂಟಿಮೆಂಟ್ ಇರಲೇ ಬಾರದು. ಹೊಡಿ ಕಡಿ ಅಂತ ಇರಬೇಕು. ಅಷ್ಟು ಅಮಾಯಕ ಜೀವಗಳನ್ನು ತೆಗೆದಿದ್ದಾರೆ ಎಂದರೆ ಸೆಂಟಿಮೆಂಟ್ ನೋಡಲೇಬಾರದು. ಅವನ್ಯಾವನೋ ಹೋಗಿ ಮೋದಿಗೆ ಹೇಳು ಅಂತಾನೆ ಅಂದರೆ, ಅವರನ್ನೆಲ್ಲಾ ಕತ್ತರಿಸಿ ಪೀಸ್ ಪೀಸ್ ಮಾಡಿ ಎಸೆಯಬೇಕು. ಅಷ್ಟು ಕ್ರೂರತನ ಅದು. ಅವರು ಹೇಡಿಗಳು. ಅವರಿಗೆ ಎಮೋಷನ್ಸ್ ತೋರಿಸುವುದು ತಪ್ಪು. ಯುದ್ಧ ಬೇಡ ಎಂದು ಕೆಲವರು ಹೇಳುತ್ತಾರೆ. ಯುದ್ಧ ಮಾಡಲೇಬೇಕು. ನಾವು ಬದುಕಬೇಕೆಂದರೆ ಯುದ್ಧ ಮಾಡಲೇಬೇಕು. ನಮ್ಮ ಮೇಲೆ ಯುದ್ಧ ಮಾಡುತ್ತಾರೆ, ನಮ್ಮ ಜನರನ್ನು ಸಾಯಿಸುತ್ತಾರೆ ಎಂದರೆ ನಾವು ಯುದ್ಧ ಮಾಡಲೇಬೇಕು. ಅವರು ಮಾಡಿದ್ದು ಹೀನ ಕೃತ್ಯ.
ಮೋದಿ ಇರುವುದರಿಂದ ಯಾರು ಯಾರಿಗೂ ಹೆದರುವ ಹಾಗಿಲ್ಲ ಎನ್ನುವ ಪ್ರೇಮ್, ‘ಪ್ರಧಾನಿ ಮೋದಿ ಇದ್ದಾರೆ. 100 ಪರ್ಸೆಂಟ್ ಅವರು ಈ ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ. ಹೊಡೆದೇ ಹೊಡೆಯುತ್ತಾರೆ. ನಮ್ಮ ಮಿಲಿಟ್ರಿಯವರೇನು ಸಾಮಾನ್ಯರಲ್ಲ. ನಮ್ಮ ಸೈನ್ಯದವರು ಸಹ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಹೊಡೆದೇ ಹೊಡೆಯುತ್ತಾರೆ. ಹೊಡೆಯಲಿ ಅಂತ ನಾನೂ ಕಾಯುತ್ತಿದ್ದೇನೆ. ಯಾರೂ ಹೆದರುವ ಅವಶ್ಯಕತೆ ಇಲ್ಲ. ಕೇಂದ್ರದಲ್ಲಿ ಮೋದಿ ಇರುವುದರಿಂದ ಯಾರು ಯಾರಿಗೂ ಹೆದರುವ ಹಾಗಿಲ್ಲ’ ಎಂದು ಹೇಳಿದ್ದಾರೆ.





