Mysore
31
scattered clouds
Light
Dark

ಕೇಕ್‍ಗೆ ಖರ್ಚು ಮಾಡುವ ಬದಲು ಯಾರಿಗಾದರೂ ಊಟ ಹಾಕಿ: ಸುದೀಪ್‍ ಸಲಹೆ

ಸುದೀಪ್‍ ಇಂದು (ಸೆಪ್ಟೆಂಬರ್‍ 02) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಅವರು ತಮ್ಮ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರುವುದಕ್ಕೆ ಯೋಚಿಸಿದ್ದಾರೆ. ಕಾರಣ, ಕಳೆದ ವರ್ಷ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಮನೆ ಬಳಿ 34 ಸಾವಿರ ಜನ ಬಂದಿದ್ದರಂತೆ. ಅಕ್ಕಪಕ್ಕದವರಿಗೆ ಸಾಕಷ್ಟು ಸಮಸ್ಯೆಯೂ ಆಗಿತ್ತಂತೆ. ಹಾಗಾಗಿ, ಈ ಬಾರಿ ಅವರು ಜಯನಗರದ MES Groundsನಲ್ಲಿ ತಮ್ಮ ಹುಟ್ಟುಹಬ್ಬವನ್ನು ಬೆಳಿಗ್ಗೆ 10ರಿಂದ 12ರವರೆಗೂ ಆಚರಿಸಿಕೊಳ್ಳಲಿದ್ದಾರೆ. ಬೇರೆ ಊರುಗಳಿಂದ ಬರುವ ಅಭಿಮಾನಿಗಳನ್ನು ಅಲ್ಲೇ ಭೇಟಿ ಮಾಡಲಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ತಮ್ಮ ಹುಟ್ಟುಹಬ್ಬಕ್ಕೆ ಬರುವ ಸಂದರ್ಭದಲ್ಲಿ ಹಾರ ಮತ್ತು ಕೇಕ್‍ಗಳನ್ನು ತರಬೇಡಿ ಎಂದು ಸುದೀಪ್‍ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಅದನ್ನು ಈ ಬಾರಿಯೂ ಪುನರುಚ್ಛರಿಸಿದ್ದಾರೆ. ಅದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ನಾನೂ ಹಾರ ಹಾಕಿಸಿಕೊಳ್ಳಬೇಕು, ದೊಡ್ಡ ಕಟೌಟ್‍ ಹಾಕಿಸಿಕೊಳ್ಳಬೇಕು, ನನ್ನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಬರಬೇಕು ಎಂಬ ಆಸೆ ಚಿತ್ರರಂಗಕ್ಕೆ ಬರುವುದಕ್ಕೆ ಮುನ್ನ ನನಗೂ ಇತ್ತು. ಆದರೆ, ಕ್ರಮೇಣ ಇವೆಲ್ಲಾ ನೋಡಿ ಮನಸ್ಸು ಬದಲಾಯಿತು. ಒಂದು ನಿಮಿಷಕ್ಕಾಗಿ ಅದೆಷ್ಟು ಹೂವು ಮತ್ತು ಕೇಕ್‍ಗಳು ಪೋಲಾಗುತ್ತವೆ. ಆ ಹಾರ ಕುತ್ತಿಗೆಗೆ ಹಾಕಿದ ಮೇಲೆ ಅದ್ಯಾವುದೋ ರಸ್ತೆಯಲ್ಲಿ ಬಿದ್ದಿರುತ್ತದೆ. ಇನ್ನು ಕೇಕ್‍ ತಿನ್ನಿಸಿದಾಗ, ತಿನ್ನಿಸಿದವರು ಬೇಸರ ಮಾಡಿಕೊಳ್ಳಬಾರದು ಎಂದು ತಿನ್ನಬೇಕು. ನಾನು ಹೆಚ್ಚು ಸಿಹಿ ತಿನ್ನುವುದಿಲ್ಲ. ಮೇಲಾಗಿ ಒಮ್ಮೆ ಕೇಕ್ ಕತ್ತರಿಸಿದ ಮೇಲೆ ಅದನ್ನು ಕೇಳುವವರಿಲ್ಲ’ ಎಂದರು.

ಇದಕ್ಕೆ ಉದಾಹರಣೆ ಸಮೇತ ವಿವರಿಸಿದ ಸುದೀಪ್‍, ‘ಒಮ್ಮೆ ಹುಟ್ಟುಹಬ್ಬದ ರಾತ್ರಿ ಮಗಳನ್ನು ಕರೆದುಕೊಂಡು ಹೊರಗೆ ಬರುವಷ್ಟರಲ್ಲಿ, ಒಂದು ಪುಟ್ಟ ಹುಡುಗಿ ರೋಡ್‍ನಲ್ಲಿದ್ದ ಆ ಕೇಕ್‍ ತೆಗೆದುಕೊಂಡು ತನ್ನ ತಮ್ಮನಿಗೆ ತಿನ್ನಿಸುತ್ತಿದ್ದಳು. ಅದನ್ನು ನೋಡಿ ಬೇಸರವಾಯ್ತು. 25 ಜನ ಒಂದು ಕೇಕ್‍ ಹೊತ್ತು ತರುತ್ತಾರೆ. ಸ್ಪರ್ಧೆ ಮೇಲೆ ದೊಡ್ಡದೊಡ್ಡ ಕೇಕ್‍ಗಳನ್ನು ತರುತ್ತಾರೆ. ಅದನ್ನು ಕತ್ತರಿಸಿದ ಮೇಲೆ, ಅದರಷ್ಟು ಅನಾಥ ಬೇರೆ ಯಾರೂ ಇರುವುದಿಲ್ಲ. ಅದನ್ನು ಯಾರು ತಿಂದರು, ಎಲ್ಲಿಗೆ ಹೋಯ್ತು, ಎಷ್ಟು ಖರ್ಚು ಮಾಡಿದರು ಇದ್ಯಾವುದೂ ಗೊತ್ತಾಗುವುದಿಲ್ಲ. ಆ ಹುಡುಗಿ ನೋಡಿ ಮನಸ್ಸು ನೋವಾಯ್ತು. ಆ ತರಹದ ಸಂಭ್ರಮ ನನಗೆ ಬೇಡ. ಹಾಗಾಗಿ, ಕೇಕ್‍ ತರಬೇಡಿ ಎಂದು ಅಭಿಮಾನಿಗಳಿಗೆ ಹೇಳುತ್ತೇನೆ’ ಎಂದರು.

ಕೇಕ್‍ಗ ಖರ್ಚು ಮಾಡುವ ಬದಲು ಯಾರಿಗಾದರೂ ಊಟ ಹಾಕಿ ಎಂದು ಅಭಿಮಾನಿಗಳಿಗೆ ಸಲಹೆ ನೀಡುವ ಅವರು, ‘ನಾನು ವೇದಾಂತ ಮಾತಾಡುತ್ತಿಲ್ಲ. ಹೀಗೆ ಅನಾವಶ್ಯಕ ಖರ್ಚು ಮಾಡುವ ಬದಲು, ಊಟ ಹಾಕಿದರೆ ಯಾರದೋ ಹೊಟ್ಟೆಯಾದರೂ ತುಂಬುತ್ತದೆ. ನನಗೆ ಕೇಕ್‍ ನಿಜಕ್ಕೂ ಇಷ್ಟವಿಲ್ಲ. ಕಳೆದ ವರ್ಷ ಹುಟ್ಟುಹಬ್ಬಕ್ಕೆ ಐದಾರು ಕೇಕ್ ಜೋಡಿಸಿದ್ದರು. ಒಂದಕ್ಕಿಂತ ಒಂದು ಚೆನ್ನಾಗಿತ್ತು. ಆ ನಂತರ ಹುಟ್ಟುಹಬ್ಬ ಆಚರಣೆ ಶುರುವಾಯಿತು. ಸ್ವಲ್ಪ ಸಮಯದ ನಂತರ ಎಲ್ಲರೂ ಅವರದೇ ಪ್ರಪಂಚದಲ್ಲಿ ಕಳೆದು ಹೋಗಿದ್ದರು. ಆ ಕೇಕ್‍ಗಳನ್ನು ಕೇಳುವವರೇ ಇಲ್ಲ. ಎಲ್ಲರಿಗೂ ಕೇಕ್‍ನ ಪೀಸ್‍ ಬೇಕು. ಯಾರಿಗೂ ಪೂರ್ತಿ ಬೇಡ. ಕಟ್‍ ಮಾಡುವವರೆಗೂ ಮಾತ್ರ ಕೇಕ್‍ಗೆ ಮಹತ್ವವಿರುತ್ತದೆ. ಕಟ್ ಮಾಡಿದ ಮೇಲೆ ಅದಕ್ಕೆ ಬೆಲೆಯೇ ಇಲ್ಲ. ಈ ಚೆಂದಕ್ಕೆ ಕೇಕ್‍ ಯಾಕೆ ಬೇಕು? ಈ ಸಂಪ್ರದಾಯ ನನಗೆ ಬೇಡ. ಹಾಗಾಗಿ, ದಯಮಾಡಿ ಕೇಕ್‍ಗಳನ್ನು ತರಬೇಡಿ’ ಎಂದರು ಸುದೀಪ್‍.