Mysore
22
broken clouds

Social Media

ಭಾನುವಾರ, 25 ಜನವರಿ 2026
Light
Dark

ಬಿಡುಗಡೆಯಾದ ಒಂದೇ ತಿಂಗಳಲ್ಲಿ ಓಟಿಟಿಯಲ್ಲಿ ‘ಇಂಡಿಯನ್‍ 2’

ಶಂಕರ್ ನಿರ್ದೇಶನದ ಮತ್ತು ಕಮಲ್‍ ಹಾಸನ್‍ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಇಂಡಿಯನ್‍ 2’ ಚಿತ್ರ ಕಳೆದ ತಿಂಗಳು ಬಿಡುಗಡೆಯಾಗಿ, ಮೊದಲ ದಿನವೇ ಫ್ಲಾಪ್‍ ಪಟ್ಟಿಗೆ ಸೇರಿದೆ. ಸ್ಟಾರ್ ನಟರ ಚಿತ್ರವೊಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಎಂಟು ವಾರಗಳ ನಂತರ ಓಟಿಟಿಯಲ್ಲಿ ಬಿಡುಗಡೆ ಆಗಬೇಕು ಎಂಬ ಒತ್ತಾಯ ಕೇಳಿಬರುತ್ತಿರುವಾಗಲೇ, ‘ಇಂಡಿಯನ್ 2’ ಬಿಡುಡೆಯಾಗಿ ನಾಲ್ಕೇ ವಾರಗಳ ಅಂತರದಲ್ಲಿ ನೆಟ್‍ಫ್ಲಿಕ್ಸ್ನಲ್ಲಿ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ.

ಹೌದು, ‘ಇಂಡಿಯನ್‍ 2’ ಚಿತ್ರವು ಇದೇ ಆಗಸ್ಟ್ 09ರಂದು ನೆಟ್‍ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಚಿತ್ರವು ಕಳೆದ ತಿಂಗಳು ಅಂದರೆ ಜುಲೈ 12ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಅದಾಗಿ ಒಂದೇ ತಿಂಗಳೊಳಗೆ ಚಿತ್ರ ಇದೀಗ ಓಟಿಟಿಯಲ್ಲಿ ಪ್ರದರ್ಶನ ಕಾಣುತ್ತಿದೆ.

ಬರೀ ಅಷ್ಟೇ ಆದರೆ ಪರವಾಗಿಲ್ಲ, ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಸೋತಿರುವುದರಿಂದ ಮೊದಲ ಒಪ್ಪಂದಕ್ಕಿಂತ ಕಡಿಮೆ ಮೊತ್ತ ಕೊಡುವುದಾಗಿ ನೆಟ್‍ಫ್ಲಿಕ್ಸ್ ಸಂಸ್ಥೆ ಹೇಳುತ್ತಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಮೊದಲು ಚಿತ್ರದ ಡಿಜಿಟಲ್‍ ಹಕ್ಕುಗಳನ್ನು ನೆಟ್‍ಫ್ಲಿಕ್ಸ್ ಸಂಸ್ಥೆಯು 120 ಕೋಟಿ ರೂ. ಕೊಟ್ಟು ಖರೀದಿಸಿತ್ತಂತೆ. ಆದರೆ, ಚಿತ್ರ ಸೋತಿರುವುದರಿಂದ, ಚಿತ್ರಕ್ಕೆ 60 ಕೋಟಿ ರೂ. ಮಾತ್ರ ಕೊಡುವುದಾಗಿ ನೆಟ್‍ಫ್ಲಿಕ್ಸ್ ಸಂಸ್ಥೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಚಿತ್ರತಂಡದವರು ಏನು ಉತ್ತರ ಕೊಡುತ್ತಾರೋ ನೋಡಬೇಕಿದೆ.

‘ಇಂಡಿಯನ್‍ 2’ ಚಿತ್ರವು ಮೊದಲ ದಿನವೇ ಅತ್ಯಂತ ಕಡಿಮೆ ಗಳಿಕೆ ಮಾಡಿತ್ತು. ಚಿತ್ರದ ಬಗ್ಗೆ ಅದೆಷ್ಟೇ ನಿರೀಕ್ಷೆಗಳಿದ್ದರೂ, ಚಿತ್ರ ಅಷ್ಟೇನೂ ದೊಡ್ಡ ಓಪನಿಂಗ್‍ ಪಡೆಯಲಿಲ್ಲ. ಇನ್ನು, ಮೊದಲ ದಿನ ಚಿತ್ರವು 25.6 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಪೈಕಿ ತಮಿಳು ಅವತರಣಿಕೆಯಾದ ‘ಇಂಡಿಯನ್‍ 2’ ಚಿತ್ರವು 16.5 ಕೋಟಿ ರೂ ಸಂಗ್ರಹಿಸಿದರೆ, ತೆಲುಗು ಅವತರಣಿಕೆಯಾದ ‘ಭಾರತೀಯುಡು 2’ ಮತ್ತು ಹಿಂದಿಯ ‘ಹಿಂದುಸ್ಥಾನಿ 2’ ಚಿತ್ರವು 7.9 ಮತ್ತು 1.2 ಕೋಟಿ ರೂ. ಕ್ರಮವಾಗಿ ಸಂಗ್ರಹಿಸಿದೆ. ಒಟ್ಟಾರೆ, ಚಿತ್ರವು 147 ಕೋಟಿ ರೂ.ನಷ್ಟು ಗಳಿಕೆ ಮಾಡಿ, ಎಷ್ಟೋ ಚಿತ್ರಮಂದಿರಗಳಿಂದ ಮಾಯವಾಗಿದೆ.

‘ಇಂಡಿಯನ್‍ 2’ ಚಿತ್ರದಲ್ಲಿ ಕಮಲ್‍ ಹಾಸನ್‍, ಸಿದ್ಧಾರ್ಥ್‍, ರಾಕುಲ್‍ ಪ್ರೀತ್‍ ಸಿಂಗ್‍, ಎಸ್‍.ಜೆ. ಸೂರ್ಯ, ಬಾಬಿ ಸಿಂಹ ಸೇರಿದಂತೆ ಹಲವರು ನಟಿಸಿದ್ದು, ಹಿರಿಯ ನಿರ್ದೇಶಕ ಶಂಕರ್ ನಿರ್ದೇಶನ ಮಾಡಿದರೆ, ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯು ಚಿತ್ರವನ್ನು ನಿರ್ಮಿಸಿದೆ.

Tags:
error: Content is protected !!