Mysore
20
clear sky

Social Media

ಬುಧವಾರ, 28 ಜನವರಿ 2026
Light
Dark

ವಿಷ್ಣುವರ್ಧನ್‍ ಅವರಿಗಾಗಿ ನನ್ನ ಜಮೀನಿನಲ್ಲೇ ಜಾಗ ಕೊಡುತ್ತಿದ್ದೆ: ನಟಿ ಶ್ರುತಿ

ಡಾ.ವಿಷ್ಣುವರ್ಧನ್‍ ಅವರ ಪುಣ್ಯಭೂಮಿ ವಿಷಯದಲ್ಲಿ ಇಷ್ಟೊಂದು ಗೊಂದಲ ಆಗುತ್ತದೆ ಎಂದು ಗೊತ್ತಿದ್ದರೆ, ನಾನೇ ನನ್ನ ಜಮೀನಿನಲ್ಲಿ ಬೇಕಾದರೆ ಜಾಗ ಕೊಡುತ್ತಿದ್ದೆ ಎಂದು ಹಿರಿಯ ನಟಿ ಶ್ರುತಿ ಹೇಳಿದ್ದಾರೆ.

ಕೆಂಗೇರಿ ಬಳಿ ಇರುವ ಅಭಿಮಾನ್ ಸ್ಟುಡಿಯೋದಲ್ಲಿದ್ದ ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ಗುರುವಾರ ರಾತ್ರೋರಾತ್ರಿ ನೆಲೆಸಮ ಮಾಡಲಾಗಿದೆ. ಈ ಬಗ್ಗೆ ಅಭಿಮಾನಿಗಳು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದು, ಚಿತ್ರರಂಗದವರು ಸಹ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಸುದೀಪ್‍, ರಿಷಭ್‍ ಶೆಟ್ಟಿ, ಧ್ರುವ ಸರ್ಜಾ ಮುಂತಾದವರು ತಾವು ಹೋರಾಟಕ್ಕೆ ಸಿದ್ಧ ಎನ್ನುವಂತಹ ಮಾತುಗಳನ್ನಾಡಿದ್ದಾರೆ.

ಶನಿವಾರ ನಡೆದ ‘ಏಳುಮಲೆ’ ಚಿತ್ರದ ಹಾಡು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ಹಿರಿಯ ನಟಿ ಶ್ರುತಿ, ‘ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿತು ಎಂಬುದೇ ಬೇಸರದ ಸಂಗತಿ. ವಿಷ್ಣುವರ್ಧನ್‍ ಅವರು ಎಂಥಾ ದೊಡ್ಡ ಲೆಜೆಂಡ್‍ ಎಂದರೆ, ನಾವು ಮಣ್ಣಾಗಿ ಹೋದರೂ, ಅವರು ಮಣ್ಣಾಗುವುದಿಲ್ಲ. ಇವತ್ತು ಅವರನ್ನು ಮಣ್ಣು ಮಾಡಿದ ಜಾಗದಲ್ಲಿ ಇಷ್ಟೊಂದು ಗೊಂದಲ, ವಿವಾದ ನೋಡಿ ನಿಜಕ್ಕೂ ಬೇಸರವಾಗುತ್ತದೆ. ಕನ್ನಡದ ಒಬ್ಬ ಮೇರುನಟನ ಪುಣ್ಯಭೂಮಿಯನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಇಷ್ಟೊಂದು ಗೊಂದಲದ ಅವಶ್ಯಕತೆ ಇರಲಿಲ್ಲ. ವಿಷ್ಣುವರ್ಧನ್‍ ಅವರನ್ನು ನಾವು ಬಹಳ ಪ್ರೀತಿಯಿಂದ ನೆನಪಿಸಿಕೊಳ್ಳಬೇಕಿತ್ತು. ಪ್ರತೀ ವರ್ಷ ನಾವು ಆ ಜಾಗಕ್ಕೆ ಹೋಗುತ್ತಿದ್ದೆವು. ಅವರನ್ನು ನೆನಪಿಸಿಕೊಳ್ಳಲು ಒಂದು ಜಾಗ ಬೇಕು ಎಂದು ಹೇಳುತ್ತಿಲ್ಲ. ನಾವು ನಮ್ಮ ಹೃದಯದಲ್ಲಿ ಅವರಿಗೆ ಬಹಳ ದೊಡ್ಡ ಜಾಗವನ್ನು ಕೊಟ್ಟಿದ್ದೇವೆ. ಅದನ್ನು ಯಾರೂ ಕಿತ್ತುಕೊಳ್ಳೋಕೆ, ನೆಲಸಮ ಮಾಡುವುದಕ್ಕೆ ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಈ ತರಹದ್ದೊಂದು ವಿಷಯ ಆಗಬಾರದಾಗಿತ್ತು ಎಂಬ ನೋವು ಸದಾ ಇರುತ್ತದೆ ಎಂದ ಶ್ರುತಿ, ‘ನ್ಯಾಯಾಲಯದಲ್ಲಿರುವುದರಿಂದ ನಾವು ಏನೂ ಮಾಡೋಕೆ ಸಾಧ್ಯವಿರಲಿಲ್ಲ. ವಿಷ್ಣುವರ್ಧನ್‍ ಅವರಿಗೆ ನಮ್ಮ ಹೃದಯದಲ್ಲಿ ಜಾಗ ಕೊಟ್ಟವರಿಗೆ ಮನೆಯಲ್ಲಿ ಕೊಡೋಕೆ ಆಗುವುದಿಲ್ಲವಾ? ನಮ್ಮ ಜಮೀನಲ್ಲಿ ಜಾಗ ಕೊಡುತ್ತಿದ್ದೆವು. ಆದರೆ, ಇಷ್ಟೊಂದು ಗೊಂದಲ ಆಗುತ್ತದೆ ಎಂದು ಯಾರಿಗೆ ಗೊತ್ತಿತ್ತು. ಆ ಜಾಗದಲ್ಲಿ ವಿವಾದ, ಗೊಂದಲವಿದೆ ಎಂದೇ ಗೊತ್ತಿರಲಿಲ್ಲ. ಇದು ಗೊತ್ತಿದ್ದರೆ ನಾನೇ ಜಾಗ ಕೊಡುತ್ತಿದ್ದೆ. ನನ್ನದೇ ಪುಟ್ಟ ಜಾಗವಿದೆ. ಖಂಡಿತವಾಗಿಯೂ ಕೊಡುತ್ತಿದ್ದೆ. ಇದು ದುರ್ವಿಧಿ. ಅಲ್ಲಿ ಹೀಗಾಗಬಹುದು ಎಂದು ಯಾರಿಗೂ ಗೊತ್ತಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

Tags:
error: Content is protected !!