Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ರಾವಣ ಅಲ್ಲದೆ ಬೇರೆ ಪಾತ್ರವಾಗಿದ್ದರೆ ಮಾಡುತ್ತಿರಲಿಲ್ಲ ಎಂದ ಯಶ್‍

ನಿತೀಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದಲ್ಲಿ ಯಶ್‍, ರಾವಣನಾಗಿ ನಟಿಸುತ್ತಿರುವುದಷ್ಟೇ ಅಲ್ಲ, ಆ ಚಿತ್ರದ ನಿರ್ಮಾಣದಲ್ಲೂ ತೊಡಗಿಸಿಕೊಂಡಿರುವ ವಿಷಯ ಗೊತ್ತಿರಬಹುದು. ಡಿಸೆಂಬರ್‍ ತಿಂಗಳಿನಿಂದ ಯಶ್‍ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎಂಬ ಸುದ್ದಿ ಇದೆ. ಈ ಮಧ್ಯೆ, ಈ ಚಿತ್ರವನ್ನು ಒಪ್ಪಿಕೊಂಡಿದ್ದೇಕೆ ಎಂದು ಯಶ್‍ ಇದೇ ಮೊದಲ ಬಾರಿಗೆ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ‘ದಿ ಹಾಲಿವುಡ್‍ ರಿಪೋರ್ಟರ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಅದೊಂದು ಅದ್ಭುತವಾದ ಪಾತ್ರ. ಅದೇ ಕಾರಣಕ್ಕೆ ನಾನು ಆ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ. ಬಹುಶಃ ಅದಲ್ಲದೆ ಬೇರೆ ಯಾವುದಾದರೂ ಪಾತ್ರವನ್ನು ಮಾಡುವುದಕ್ಕೆ ಒಪ್ಪುತ್ತಿದ್ದಿರಾ? ಎಂಬ ಪ್ರಶ್ನೆಯನ್ನು ಕೇಳಬಹುದು. ಇಲ್ಲ, ರಾವಣನ ಪಾತ್ರಕ್ಕೆ ಹಲವು ಮಜಲುಗಳಿವೆ ಮತ್ತು ಒಬ್ಬ ನಟನಾಗಿ ಆ ತರಹದ ಪಾತ್ರ ಮಾಡುವುದು ಬಹಳ ಇಷ್ಟ. ಆ ಪಾತ್ರಕ್ಕೆ ಸಾಕಷ್ಟು ಸ್ಕೋಪ್‍ ಇದೆ ಮತ್ತು ಒಬ್ಬ ನಟನಾಗಿ ಆ ಪಾತ್ರ ನಿರ್ವಹಿಸಲು ಕಾತುರದಿಂದ ಕಾಯುತ್ತಿದ್ದೇನೆ’ ಎಂದು ಯಶ್‍ ಹೇಳಿದ್ದಾರೆ.

ಈ ಚಿತ್ರದ ಭಾಗವಾಗಿರುವುದರ ಕುರಿತು ಮಾತನಾಡಿರುವ ಯಶ್‍, ‘ನಾನು ‘ಟಾಕ್ಸಿಕ್‍’ ಚಿತ್ರದ ವಿಎಫ್‍ಎಕ್ಸ್ ಕೆಲಸ ಕುರಿತು ಓಡಾಡುತ್ತಿದ್ದಾಗ, DNEG ಮತ್ತು ಪ್ರೈಮ್‍ ಫೋಕಸ್‍ ಸಂಸ್ಥೆಗಳ ನಮಿತ್‍ ಮಲ್ಹೋತ್ರಾ ಅವರನ್ನು ಭೇಟಿ ಮಾಡುವ ಸಂದರ್ಭ ಬಂತು. ಆಗ ನಮಿತ್‍, ರಾಮಾಯಣ ಚಿತ್ರದ ಬಗ್ಗೆ ಹೇಳಿದರು. ನಮಿತ್‍ ಅವರ ದೃಷ್ಟಿಕೋನ ಇಷ್ಟವಾಯಿತು. ಚಿತ್ರವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಮುಟ್ಟಿಸಬೇಕು ಎಂಬ ಅವರ ಕಲ್ಪನೆಗೆ ಕೈಜೋಡಿಸಬೇಕು ಎಂದನಿಸಿತು. ಹಾಗಾಗಿ, ‘ರಾಮಾಯಣ’ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ’ ಎಂದು ಯಶ್‍ ಹೇಳಿದ್ದಾರೆ.

‘ರಾಮಾಯಣ’ ಚಿತ್ರವು ಎರಡು ಭಾಗಗಳಲ್ಲಿ ತಯಾರಾಗಲಿದ್ದು, ಈ ಹಿಂದೆ ‘ದಂಗಲ್‍’ ಚಿತ್ರವನ್ನು ನಿರ್ದೇಶಿಸಿದ್ದ ನಿತೀಶ್‍ ತಿವಾರಿ, ಈ ‘ರಾಮಾಯಣ’ ಚಿತ್ರದ ನಿರ್ದೇಶಕರು. ರಾಮನಾಗಿ ರಣಬೀರ್ ‍ಕಪೂರ್‍ ನಟಿಸುತ್ತಿದ್ದರೆ, ಸೀತೆಯಾಗಿ ಸಾಯಿಪಲ್ಲವಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು, ಸನ್ನಿ ಡಿಯೋಲ್‍, ಆಂಜನೇಯನಾಗಿ ಕಾಣಿಸಿಕೊಳ್ಳುತ್ತಿದ್ದು, ಯಶ್‍ ಈ ಚಿತ್ರದಲ್ಲಿ ರಾವಣನಾಗಿ ನಟಿಸಲಿದ್ದಾರೆ.

Tags: