ಲಾಂಗ್ ಹಿಡಿದು ರೀಲ್ಸ್ ಮಾಡಿದ ಕಾರಣಕ್ಕೆ ಬಂಧನಕ್ಕೊಳಗಾಗಿದ್ದ ವಿನಯ್ ಗೌಡ, ಜಾಮೀನಿನ ಮೇಲೆ ಹೊರಬಂದ ನಂತರ ತಾವು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ. ಅಷ್ಟೇ ಅಲ್ಲ, ಈ ಪ್ರಕರಣ ಇಷ್ಟು ದೊಡ್ಡದಾಗುತ್ತದೆ ಎಂದು ತಮಗೆ ಗೊತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಕಳೆದ ವಾರ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ‘ಬಿಗ್ ಬಾಸ್’ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಗೌಡ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಶಸ್ತ್ರಾಸ್ತ್ರ ಕಾಯ್ದೆಯಡಿ ವಿನಯ್ ಹಾಗೂ ರಜತ್‌ರನ್ನು ಪೊಲೀಸರು ಬಂಧಿಸಿದ್ದರು. ನ್ಯಾಯಾಲಯವು ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಬೇಲ್ ಪ್ರತಿ ಪೊಲೀಸರಿಗೆ ತಡವಾಗಿ ಸಿಕ್ಕ ಹಿನ್ನೆಲೆಯಲ್ಲಿ ರಜತ್ ಮತ್ತು ವಿನಯ್ ಜೈಲಿನಲ್ಲೇ ಒಂದು ದಿನ ಇದ್ದು, ಹೊರಬಂದಿದ್ದಾರೆ.
ಬಿಡುಗಡೆಯ ನಂತರ ವೀಡಿಯೋ ಮಾಡಿ ಕ್ಷಮೆಯಾಚಿಸಿರುವ ವಿನಯ್, ಅದನ್ನು ತಮ್ಮ ಇನ್‍ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ವಿನಯ್, ‘ಕರ್ನಾಟಕದ ಪ್ರತಿಯೊಬ್ಬರಲ್ಲೂ ನಾನು ಕ್ಷಮೆ ಕೇಳಬೇಕಿತ್ತು. ನನ್ನನ್ನು ಕ್ಷಮಿಸಿ. ನನ್ನಿಂದ ನನ್ನ ಹೆಂಡತಿಗೆ, ಮಗನಿಗೆ ತೊಂದರೆಯಾಗಿದೆ. ನನ್ನ ಸ್ನೇಹಿತರಿಗೂ ಸಮಸ್ಯೆಯಾಗಿದ್ದು, ಆದರೂ ಜೊತೆಗೆ ಪೊಲೀಸ್ ಸ್ಟೇಷನ್ ಎದುರು ಕಾದು ನಿಂತಿದ್ದಾರೆ. ನನಗೆ ತುಂಬಾ ಸಹಾಯ ಮಾಡಿದ್ದಾರೆ’ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮದವರಲ್ಲೂ ಕ್ಷಮೆ ಕೋರಿರುವ ಅವರು, ‘ನನ್ನಿಂದ ತಪ್ಪಾಗಿದೆ. ಮಚ್ಚು ಇಟ್ಟುಕೊಂಡು ವೀಡಿಯೋ ಮಾಡಿದ್ದು ಎಲ್ಲರಿಗೂ ನೋವಾಗಿದೆ. ನಾನು ಹೀಗೆ ಮಾಡಬಾರದಾಗಿತ್ತು. ಎಲ್ಲರಿಗೂ ತೊಂದರೆ ಕೊಟ್ಟಿದ್ದೇನೆ. ಈ ವಿಷಯ ಇಷ್ಟೊಂದು ದೊಡ್ಡದಾಗುತ್ತದೆ ಎಂದು ಗೊತ್ತಿರಲಿಲ್ಲ. ಇದರಲ್ಲಿ ನನ್ನದೂ ತಪ್ಪಿದೆ. ನನ್ನ ಎಚ್ಚರಿಕೆಯಲ್ಲಿ ನಾನು ಇರಬೇಕಿತ್ತು. ನಾನು ಈ ತರಹ ಮಾಡಬಾರದಿತ್ತು’ ಎಂದಿದ್ದಾರೆ.
ಪೊಲೀಸ್ ಇಲಾಖೆಯವರ ಕಾರ್ಯವೈಖರಿಯನ್ನು ಮೆಚ್ಚಿರುವ ಅವರು, ‘ಪೊಲೀಸ್ ಇಲಾಖೆಯವರು ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಒಬ್ಬ ಸೆಲೆಬ್ರಿಟಿ ಮತ್ತು ಸಾಮಾನ್ಯ ಮನುಷ್ಯ ಎಂದು ವ್ಯತ್ಯಾಸ ತೋರಿಸದೆ, ಕಾನೂನಿನ ಪ್ರಕಾರ ಕೆಲಸ ಮಾಡಿದ್ದಾರೆ. ಒಬ್ಬ ಸಾಮಾನ್ಯ ಮನುಷ್ಯನನ್ನು ಹೇಗೆ ನೋಡಿಕೊಳ್ಳಬೇಕೋ, ಹಾಗೆ ನೋಡಿಕೊಂಡಿದ್ದಾರೆ. ದಯವಿಟ್ಟು ಅವರ ಮೇಲೆ ಯಾವುದೇ ಆರೋಪಗಳನ್ನು ಮಾಡಬೇಡಿ’ ಎಂದು ಮನವಿ ಮಾಡಿದ್ದಾರೆ.
ಕಳೆದ ವರ್ಷ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿನಯ್, ಸದ್ಯ ವಿನೋದ್ ಪ್ರಭಾಕರ್ ಅಭಿನಯದ ‘ಬಲರಾಮನ ದಿನಗಳು’ ಮತ್ತು ಕೋಮಲ್ ಅಭಿನಯದ ‘ಕೋಣ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.





