ಈ ಹಿಂದೆ ಕೃಷ್ಣ ಅಭಿನಯದಲ್ಲಿ ‘ಮದರಂಗಿ’ ಚಿತ್ರವನ್ನು ನಿರ್ದೇಶಿಸಿದ್ದ ಮಲ್ಲಿಕಾರ್ಜುನ ಮುತ್ತಲಗೇರಿ, ಈಗ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರದೊಂದಿಗೆ ಬಂದಿದ್ದಾರೆ. ಈ ಬಾರಿ ಅವರು ‘ಹುಲಿಬೀರ’ ಎಂಬ ಉತ್ತರ ಕರ್ನಾಟಕದ ಸೊಗಡಿನ ಕಥೆಯೊಂದಿಗೆ ವಾಪಸ್ಸಾಗಿದ್ದು, ಉತ್ತರ ಕರ್ನಾಟಕದ ಭಾಗದಲ್ಲಿ ‘ರೂರಲ್ ಸ್ಟಾರ್’ ಎಂದೇ ಜನಪ್ರಿಯವಾಗಿರುವ ಅಂಜನ್ ಈ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.
ಸಾಯಿ ಸ್ಟಾರ್ ಸಿನಿಮಾಸ್ ಮೂಲಕ ದಾವಲ ಸಾಹೇಬ ಹುಣಶೀಮರದ, ಅಶೋಕ್ ಎನ್ ಹಾಗೂ ಸುಜಾತ ಗಿರೀಶ್ ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮಲ್ಲಿಕಾರ್ಜುನ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
‘ಹುಲಿ ಬೀರ’ ಚಿತ್ರದ ಕುರಿತು ಮಾತನಾಡುವ ಮಲ್ಲಿಕಾರ್ಜುನ, ‘ಇದು ನನ್ನ ನಿರ್ದೇಶನದ ಐದನೇ ಚಿತ್ರ. ಹುಲಿಬೀರ ನಾಯಕನ ಹೆಸರು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಎಲ್ಲದಕ್ಕೂ ಧೈರ್ಯದಿಂದ ಮುನ್ನುಗ್ಗುವ ಹುಡುಗರನ್ನು ಹುಲಿ ಅನ್ನುತ್ತಾರೆ, ನಾಯಕ ಬೀರ ಹಳ್ಳಿಯ ಯಾವುದೇ ಸಮಸ್ಯೆ ಇರಲಿ ಮುಂದೆ ನಿಂತು ಕೆಲಸ ಮಾಡುತ್ತಾನೆ. ಆತನನ್ನು ಹಳ್ಳಿಯ ಜನರೆಲ್ಲ ‘ಹುಲಿಬೀರ’ ಎಂದು ಕರೆಯುತ್ತಿರುತ್ತಾರೆ’ ಎಂದು ಮಾಹಿತಿ ಕೊಡುತ್ತಾರೆ.
ಚಿತ್ರದಲ್ಲೊಂದು ಒಳ್ಳೆಯ ಸಂದೇಶವಿದೆ ಎನ್ನುವ ಅವರು, ‘ವಿದ್ಯಾವಂತ ಯುವಕ, ಯುವತಿಯರೆಲ್ಲ ಕೆಲಸ ಎಂದು ಸಿಟಿಗೆ ಹೋದರೆ ಆ ಹಳ್ಳಿಗಳನ್ನು ಬೆಳೆಸೋರು ಯಾರು? ಈ ಸಮಸ್ಯೆಯನ್ನು ಬೀರ ಹೇಗೆ ಬಗೆಹರಿಸುತ್ತಾನೆ. ಅವರೆಲ್ಲಾ ಮತ್ತೆ ಹೇಗೆ ಹಳ್ಳಿಗೆ ಮರಳುವಂತೆ ಮಾಡಿ, ಹಳ್ಳಿಯನ್ನು ಉದ್ದರಿಸುತ್ತಾನೆ. ಕಾಮಿಡಿ, ಸೆಂಟಿಮೆಂಟ್, ಮನರಂಜನೆಯ ಜತೆಗೆ ಒಂದೊಳ್ಳೆಯ ಸಂದೇಶವನ್ನು ಈ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದೇವೆ. ಬಾದಾಮಿ ಸುತ್ತಮುತ್ತಲ ಗ್ರಾಮಗಳಲ್ಲಿ ಎರಡು ಹಂತಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ರಂಗಾಯಣ ರಘು ಅವರು ಗ್ರಾಮದ ಹಿರಿಯನ ಪಾತ್ರ ಮಾಡಿದ್ದಾರೆ. ಚಿತ್ರವೀಗ ಡಬ್ಬಿಂಗ್ ಹಂತದಲ್ಲಿದ್ದು ನವೆಂಬರ್ ವೇಳೆಗೆ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ’ ಎಂದರು.
ನಾಯಕ ಅಂಜನ್ ಮಾತನಾಡಿ, ‘ನಾನು ಉತ್ತರ ಕರ್ನಾಟಕದ ಕುಂದಗೋಳ ಎಂಬ ಪುಟ್ಟ ಗ್ರಾಮದವನು. ರೀಲ್ಸ್, ಶಾರ್ಟ್ ಫಿಲಂ ಮಾಡುತ್ತಾ, ಸೋಷಿಯಲ್ ಮೀಡಿಯಾ ಮೂಲಕ ಜನರಿಂದ ಗುರುತಿಸಿಕೊಂಡಿದ್ದೇನೆ. ಇದಕ್ಕೂ ಮೊದಲು ‘ಯರ್ರಾಬಿರ್ರಿ’ ಚಿತ್ರದ ಮೂಲಕ ನಾಯಕನಾದೆ. ನಾವು ಮೊದಲು ನಮ್ಮ ಊರು, ಹಳ್ಳಿಗಳನ್ನು ಕಾಪಾಡಬೇಕು ಎಂಬ ಸಂದೇಶ ಇಟ್ಟುಕೊಂಡು ಮಾಡಿದ ಚಿತ್ರವಿದು’ ಎಂದರು.
ನಾಯಕಿ ಚೈತ್ರ ತೋಟದ ಇದಕ್ಕೂ ಮೊದಲು ‘ಬ್ರಹ್ಮರಾಕ್ಷಸ’, ‘ವಿಧುರ’, ‘ಚೌಕಿದಾರ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರಂತೆ. ‘ಈ ಚಿತ್ರದಲ್ಲಿ ನಾಯಕನ ಅಕ್ಕನ ಮಗಳ ಪಾತ್ರ ಮಾಡಿದ್ದೇನೆ’ ಎಂದರು. ಅವರ ಜೊತೆಗೆ ವನು ಪಾಟೀಲ್ ಹಾಗೂ ಅಂಜಲಿ ಚಿತ್ರದ ಉಳಿದ ನಾಯಕಿಯರಾಗಿ ನಟಿಸಿದ್ದಾರೆ.
‘ಹುಲಿಬೀರ’ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ಮತ್ತು ಧರ್ಮ ವಿಶ್ ಹಿನ್ನೆಲೆ ಸಂಗೀತವಿದೆ.





