ಮುಂಬೈ: ಅಮೆರಿಕಾದ ಶ್ರೀಮಂತ ಕಂಪನಿ ಆ್ಯಪಲ್ ವಿರುದ್ಧ ಬಾಲಿವುಡ್ ಸೆಲೆಬ್ರಿಟಿಗಳು ಅಸಮಾಧಾನ ವ್ಯಕ್ತಪಡಿಸುತಿದ್ದು, ಬಾಲಿವುಡ್ ನಟ ಹೃತಿಕ್ ರೋಷನ್ ಕೂಡ ಕಂಪನಿ ವಿರುದ್ಧ ಗರಂ ಆಗಿದ್ದಾರೆ. ಅಷ್ಟಕ್ಕೂ ಕಂಪನಿ ಮಾಡಿದ ತಪ್ಪೇನೆ? ಹೃತಿಕ್ ರೋಷನ್ ಅಸಮಾಧಾನ ಹೊರಹಾಕಲು ಕಾರಣ ಏನು? ಇಲ್ಲಿದೆ ಮಾಹಿತಿ.
ಆ್ಯಪಲ್ ಕಂಪನಿಯು ಒಂದು ಹೊಸ ಐಪ್ಯಾಡ್ ಜಾಹೀರಾತುನ್ನು ಬಿಡುಗಡೆ ಮಾಡಿದೆ. ಐಪ್ಯಾಡ್ ಪ್ರೋ ಎಷ್ಟು ಪವರ್ ಫುಲ್ ಆಗಿದೆ ಎಂಬುದನ್ನು ತಿಳಿಸಲು ಈ ಜಾಹಿರಾತನ್ನು ಸಿದ್ಧಪಡಿಸಲಾಗಿದೆ. ಈ ಜಾಹಿರಾತನ್ನು ನಟ ಹೃತಿಕ್ ರೋಷನ್ ಖಾರವಾಗಿ ಖಂಡಿಸಿದ್ದಾರೆ.
ಪುಸ್ತಕಗಳು, ಸಂಗೀತ, ಸಾಧನಗಳು, ಟಿ.ವಿ, ಗ್ರಾಮೋಫೋನ್, ಗೊಂಬೆ, ಪೇಂಟಿಂಗ್ಸ್, ಕಲಾಕೃತಿಗಳು, ಸ್ಪೀಕರ್, ಕ್ಯಾಮೆರಾ ಮುಂತಾದ ವಸ್ತುಗಳನ್ನು ದೊಡ್ಡ ಕ್ರಸರ್ ಮೂಲಕ ನಾಶಪಡಿಸುವ ದೃಶ್ಯ ಇದರಲ್ಲಿದೆ. ಆ ಎಲ್ಲಾ ಸಾಧನಗಳ ಕೆಲಸವನ್ನು ಕೇವಲ ಒಂದು ಐಪ್ಯಾಡ್ ಮಾಡುತ್ತದೆ ಎಂಬುದನ್ನು ಗ್ರಾಹಕರಿಗೆ ತಿಳಿಸುವುದು ಈ ಜಾಹೀರಾತಿನ ಉದ್ದೇಶವಾಗಿದೆ.
ಈ ಜಾಹೀರಾತು ನೋಡಿದ ಅನೇಕ ಸೆಲೆಬ್ರಿಟಿಗಳು ವಿರೋಧ ವ್ಯಕ್ತಪಡಿಸಿದ್ದು, ಈ ಜಾಹೀರಾತಿನಿಂದ ಸಿನಿಮಾ, ಸಂಗೀತ, ಚಿತ್ರಕಲೆ, ಬರವಣಿಗೆ ಮುಂತಾದ ವಿಷಯಗಳಿಗೆ ಅವಮಾನ ಮಾಡಲಾಗಿದೆ ಎಂದು ಹಾಲಿವುಡ್‌ನ ಸೆಲೆಬ್ರಿಟಿಗಳು ಕೂಡ ಅಭಿಪ್ರಾಯ ತಿಳಿಸಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೃತಿಕ್ ರೋಷನ್ ಬರೆದುಕೊಂಡಿದ್ದಾರೆ. ಆ್ಯಪಲ್ ಕಂಪನಿಯ ಹೊಸ ಜಾಹೀರಾತು ಎಷ್ಟು ಕಳಪೆ ಮತ್ತು ಅವೈಜ್ಞಾನಿಕದಿಂದ ಕೂಡಿದೆ ಎಂದು ಪೋಸ್ಟ್ ಮಾಡಿ ಕಂಪನಿ ವಿರುದ್ಧ ಗರಂ ಆಗಿದ್ದಾರೆ. ಆ್ಯಪಲ್ ಕಂಪನಿ ಈ ಜಾಹೀರಾತು ಕಲಾ ಪ್ರಕಾರಗಳಿಗೆ ಅವಮಾನ ಮಾಡಿದೆ ಎಂದು ನೆಟ್ಟಿಗರು ಕೂಡ ಕಮೆಂಟ್ ಮಾಡುತ್ತಿದ್ದಾರೆ.