ಕನ್ನಡ ಚಿತ್ರರಂಗದಲ್ಲಿ ಪ್ರೇಮಕಥೆಗಳಿಗೆ ಬರವಿಲ್ಲ. ಇದುವರೆಗೂ ಸಾವಿರಾರು ಪ್ರೇಮಕಥೆಗಳು ಬಂದಿವೆ, ಇನ್ನೂ ಬರುತ್ತಲೇ ಇವೆ. ಈ ಸಾಲಿಗೆ ‘ಶಿವಗಂಗ’ ಎಂಬ ಹೊಸ ಚಿತ್ರವೂ ಸೇರಿಕೊಂಡಿದೆ.
ಶ್ರೀ ಪಂಚಮಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಕುಮಾರ್ ಸಿ.ವಿ ನಿರ್ಮಾಣ ಮಾಡುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿರುವ ಚಿತ್ರ ‘ಶಿವಗಂಗ’. ಶ್ರೀಮಂಜು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಹರ್ಷ ಕಾಗೋಡು ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಸಿರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್‍ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿವೆ.
‘ಶಿವಗಂಗ ಎರಡು ಪಾತ್ರಗಳ ಹೆಸರು ಎಂದು ಮಾತು ಶುರು ಮಾಡಿದ ನಿರ್ದೇಶಕ ಶ್ರೀಮಂಜು, ‘ಇದೊಂದು ಪ್ರೇಮಪ್ರಧಾನ ಚಿತ್ರ. ಜೊತೆಗೆ ಸಾಮಾಜಿಕ ಸಂದೇಶವೂ ಇದೆ. ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಕುಮಾರ್ ಸಿ.ವಿ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ಮಾಣಕ್ಕೂ ಮುಂದಾದರು. ಅವರೇ ಈ ಚಿತ್ರದ ನಾಯಕನಾಗೂ ನಟಿಸಿದ್ದಾರೆ. ರಿವಾನ್ಸಿ ನಾಯಕಿಯಾಗಿ ಅಭಿನಯಿಸಿದ್ದಾರೆ’ ಎಂದು ಮಾಹಿತಿ ನೀಡಿದರು.
ಈ ಚಿತ್ರಕ್ಕೆ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಿಲ್ಲ ಎನ್ನುವ ಶ್ರೀಮಂಜು, ‘ಆದರೂ ತೆರೆಯ ಮೇಲೆ ಬರುತ್ತದೆ. ಅದೇ ಚಿತ್ರದ ವಿಶೇಷತೆ. ಈ ಚಿತ್ರದಲ್ಲಿ ಹಲವು ವಿಷಯಗಳು ಬಂದು ಹೋಗುತ್ತವೆ. ಚಿತ್ರರಂಗದ ಬಗ್ಗೆ, ಗಾಂಧಿನಗರದ ಬಗ್ಗೆ ಕೆಲವು ವಿಷಯಗಳಿವೆ. ಪಾತ್ರಧಾರಿಗಳ್ಯಾರಿಗೂ ಕಥೆ ಗೊತ್ತಿಲ್ಲ. ಕೆಲವರಿಗೆ ಅವರವರ ಪಾತ್ರದ ಬಗ್ಗೆ ಮಾತ್ರ ಗೊತ್ತಿದೆ. ಅವರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಚಿತ್ರ ನೋಡಿದ ಮೇಲೆ ಅವರಿಗೆ ಕಥೆ ಗೊತ್ತಾಗುತ್ತದೆ. ಅಲ್ಲಿಯವರೆಗೂ ಕಥೆ ಗೊತ್ತಾಗುವುದಿಲ್ಲ. ಕಥೆ ಬಿಟ್ಟುಕೊಡಬಾರದು ಎಂಬುದು ನನ್ನಾಸೆ’ ಎಂದರು.
ನಿರ್ಮಶಪಕ ನಾಯಕ ಕುಮಾರ್ ಮೂಲತಃ ರೈತರಂತೆ. ಜೊತೆಗೆ ರಿಯಲ್ ಎಸ್ಟೇಟ್ ಉದ್ಯಮಿಯೂ ಹೌದು. ‘ನಿರ್ದೇಶಕ ಶ್ರೀಮಂಜು ಅವರು ಹೇಳಿದ ಕಥೆ ಇಷ್ಟವಾಯಿತು. ಕಥೆ ಇಷ್ಟವಾಗಿ ನಾನೇ ನಿರ್ಮಾಣ ಕೂಡ ಮಾಡಿದ್ದೀನಿ. ಯಾವುದೋ ಲಿಟಿಗೇಶನ್ ಜಮೀನಿತ್ತು. ಅದರಿಂದ ಬಂದ ಹಣವನ್ನು ತಂದು ಚಿತ್ರಕ್ಕೆ ಹಾಕಿದ್ದೇನೆ. ಚಿತ್ರತಂಡದ ಸದಸ್ಯರ ಸಹಕಾರದಿಂದ ಒಂದೊಳ್ಳೆಯ ಚಿತ್ರ ಮಾಡಿದ್ದೇವೆ. ನನಗೆ ಮೊದಲಿನಿಂದ ಚಿತ್ರ ಮಾಡುವ ಆಸೆ ಇತ್ತು. ಆದರೆ, ಯಾರೂ ಪರಿಚಯವಿರಲಿಲ್ಲ. ಆಗ ಶ್ರೀಮಂಜು ಅವರ ಪರಿಚಯವಾಯಿತು. ಅವರು ಹೇಳಿದ ಕಥೆ ಇಷ್ಟವಾಯ್ತು. ಆದರೆ, ಕ್ಲೈಮ್ಯಾಕ್ಸ್ ಗೊತ್ತಿಲ್ಲ’ ಎಂದರು.
‘ಶಿವಗಂಗಾ’ ಚಿತ್ರದಲ್ಲಿ ಸಂಗೀತ, ಪುಷ್ಪ, ಸುಧೀಂದ್ರ, ಶಿವಮೊಗ್ಗ ರಾಮಣ್ಣ, ನಟರಾಜು, ಭಾಗ್ಯಮ್ಮ, ನಾಗರಾಜ್ ಮುಂತಾದವರಿದ್ದಾರೆ. ಹರ್ಷ ಕಾಗೋಡು ಸಂಗೀತ, ಸುನಯ್ ಜೈನ್ ಛಾಯಾಗ್ರಹಣ ಈ ಚಿತ್ರಕ್ಕಿದೆ.





