Mysore
21
mist

Social Media

ಸೋಮವಾರ, 08 ಡಿಸೆಂಬರ್ 2025
Light
Dark

ನಿರ್ದೇಶಕಿಯಾದ ಹರ್ಷಿಕಾ ಪೂಣಚ್ಛ; ‘ಚಿ ಸೌಜನ್ಯ’ ಕಥೆ ಹೇಳಲು ತಯಾರಿ

ಕಳೆದ ವರ್ಷ ಬಿಡುಗಡೆಯಾದ ‘ಹಗ್ಗ’ ಚಿತ್ರದಲ್ಲಿ ನಟಿಸಿದ್ದ ಹರ್ಷಿಕಾ ಪೂಣಚ್ಛ, ಆ ನಂತರ ಯಾವೊಂದು ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಅವರು ನಟನೆ ಬದಲಿಗೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ತಮ್ಮ ನಿರ್ದೇಶನದ ಮೊದಲ ಚಿತ್ರದಲ್ಲಿ ಹೆಣ್ಣು ಮಕ್ಕಳ ಶೋಷಣೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.

ಕಂಸಾಳೆ ಫಿಲಂಸ್ ಹಾಗೂ ಭುವನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಮಧು ಮರಿಸ್ವಾಮಿ ಮತ್ತು ಭುವನ್ ಪೊನ್ನಣ್ಣ ನಿರ್ಮಿಸುತ್ತಿರುವ, ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಇತ್ತೀಚೆಗೆ ನಡೆಯಿತು. ದೇಶದಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಹೆಣ್ಣುಮಕ್ಕಳ ಶೋಷಣೆ ಕುರಿತು ಜಾಗೃತಿ ಮೂಡಿಸುವ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ‘ಚಿ.ಸೌಜನ್ಯ’ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ‘ಒಂದು ಹೆಣ್ಣಿನ ಕಥೆ’ ಎಂಬ ಅಡಿಬರಹವಿದೆ.

ಈ ಚಿತ್ರದ ಕುರಿತು ಮಾತನಾಡಿದ ಭುವನ್‍ ಪೊನ್ನಣ್ಣ, ‘ಭಾರತದಲ್ಲಿ ಪ್ರತಿವರ್ಷ 36 ಸಾವಿರಕ್ಕೂ ಅಧಿಕ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಸರಾಸರಿ ದಿನಕ್ಕೆ ನೂರು ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಈ ಅತ್ಯಾಚಾರಗಳ ಬಗ್ಗೆ ಕೇಸ್ ದಾಖಲಾಗುತ್ತದೆ. ವಿಚಾರಣೆ ನಡೆಯುತ್ತದೆ. ಆದರೆ, ಆ ಹೆಣ್ಣುಮಕ್ಕಳಿಗೆ ನ್ಯಾಯ ದೊರಕಿರುವುದು ತೀರ ಕಡಿಮೆ. ನಾನು ಹಾಗೂ ಹರ್ಷಿಕಾ ಅವರು ಕೂಡ ಇಂತಹ ಘಟನೆ ಬಗ್ಗೆ ನಮಗೆ ತಿಳಿದಾಗ ಅ ಸ್ಥಳಕ್ಕೆ ಹೋಗಿ ಸಾವಿರಾರು ಜನರೊಂದಿಗೆ ಹೋರಾಟ ಮಾಡಿದ್ದೇವೆ. ಈ ವಿಷಯಗಳ ಕುರಿತು ಜನರಿಗೆ ಜಾಗೃತಿ ಮೂಡಿಸಲು ಸಿನಿಮಾ ಉತ್ತಮವಾದ ಮಾಧ್ಯಮ ಎಂದನಿಸಿತು. ಹಾಗಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಸಮಾಜಕ್ಕೆ ಉತ್ತಮ ಸಂದೇಶವಿರುವ ಈ ಚಿತ್ರವನ್ನು ನಾನು ಹಾಗೂ ಮಧು‌ ಮರಿಸ್ವಾಮಿ ಜಂಟಿಯಾಗಿ ನಿರ್ಮಿಸುತ್ತಿದ್ದೇವೆ. ಈ ಕಥೆಯನ್ನು ಕಿಶೋರ್ ಅವರ ಬಳಿ ಹೇಳಿದಾಗ ಕಥೆ ಕೇಳಿ, ನಟಿಸಲು ಒಪ್ಪಿಕೊಂಡರು’ ಎಂದು ತಿಳಿಸಿದರು.

ತಾನು ನಿರ್ದೇಶನ ಮಾಡುತ್ತೀನಿ ಅಂತ ಅಂದುಕೊಂಡಿರಲಿಲ್ಲ ಎಂದ ಹರ್ಷಿಕಾ ಪೂಣಚ್ಛ, ‘ಹೆಣ್ಣುಮಕ್ಕಳ ಶೋಷಣೆಯ ಬಗ್ಗೆ ನಾನು ಹಾಗೂ ಭುವನ್ ಸಾಕಷ್ಟು ಹೋರಾಟ ಮಾಡಿದ್ದೇವೆ. ಇಂತಹ ಸಾಮಾಜಿಕ ಕಳಕಳಿಯುಳ್ಳ ಚಿತ್ರವನ್ನು ಮಾಡಬೇಕೆಂದು ಆಸೆಯಿತ್ತು. ಹೆಣ್ಣುಮಕ್ಕಳ ನೋವು ಗಂಡಸರಿಗಿಂತ ಹೆಣ್ಣುಮಕ್ಕಳಿಗೆ ಜಾಸ್ತಿ ಗೊತ್ತಿರುವುದರಿಂದ ಈ ಚಿತ್ರವನ್ನು ನೀವೇ ನಿರ್ದೇಶನ ಮಾಡಿ ಭುವನ್‍ ಮತ್ತು ಮಧು ಹೇಳಿದರು. ಹಾಗಾಗಿ, ಈ ಚಿತ್ರದ ನಿರ್ದೇಶನಕ್ಕೆ ಕೈ ಹಾಕಿದೆ’ ಎಂದರು.

ಇದು ಯಾವುದೇ ಒಂದು ಘಟನೆಯ ಕುರಿತಾದ ಚಿತ್ರವಲ್ಲ ಎನ್ನುವ ಹರ್ಷಿಕಾ, ‘ದೇಶದಲ್ಲಿ ನಡೆದಿರುವ ಇಂತಹ ಹಲವು ಅಮಾನುಷ ಘಟನೆಗಳನ್ನಿಟ್ಟುಕೊಂಡು ಮಾಡುತ್ತಿರುವ ಚಿತ್ರ. ನಮ್ಮ ಚಿತ್ರದ ನಾಯಕಿ ಹೆಸರು ಸೌಜನ್ಯ ಅಷ್ಟೇ. ಇನ್ನೂ ಈ ಚಿತ್ರದ ಕಥೆ ಮಾಡಿಕೊಂಡ ತಕ್ಷಣ ಪ್ರಮುಖ ಪಾತ್ರಕ್ಕೆ ನಮಗೆ ತಕ್ಷಣ ಅನಿಸಿದು ಕಿಶೋರ್ ಅವರು. ಕಥೆ ಕೇಳಿದ ತಕ್ಷಣ ನಟಿಸಲು ಕಿಶೋರ್ ಅವರು ಒಪ್ಪಿಕೊಂಡರು. ಇಂದು ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಮಾತ್ರ ಬಿಡುಗಡೆ ಮಾಡಿದ್ದೇವೆ. ಚಿತ್ರೀಕರಣ ಆರಂಭವಾಗಲು ಇನ್ನೆರಡು ತಿಂಗಳು ಬೇಕು’ ಎಂದರು.

ಕಿಶೋರ್‍ ಮಾತನಾಡಿ, ‘ನಾವು ದೇಶದಲ್ಲಿ ಇಂತಹ ಎಷ್ಟೇ ಘಟನೆಗಳು ನಡೆದರೂ ನಮ್ಮ ಮನೆಯದಲ್ಲ ಎನ್ನುವ ರೀತಿಯಲ್ಲಿ ಇರುತ್ತೇವೆ. ಆದರೆ, ಆಕೆ ಕೂಡ ಒಬ್ಬರ ಮಗಳು, ಒಬ್ಬರ ಸಹೋದರಿ ಆಗಿರುತ್ತಾರೆ. ಆ ನಿಟ್ಟಿನಲ್ಲಿ ನಾವು ಯೋಚಿಸಬೇಕು. ಇನ್ನೂ ಇಂತಹ ವಿಷಯಗಳನ್ನು ಸಿನಿಮಾ ಮೂಲಕ ಹೇಳಿದಾಗ ಅದು ಬೇಗ ಜನರಿಗೆ ತಲಪುತ್ತದೆ. ಇಂತಹ ವಿಷಯವನ್ನಿಟ್ಟುಕೊಂಡು ಚಿತ್ರ ನಿರ್ಮಾಣ ಮಾಡುತ್ತಿರುವ ನಿರ್ಮಾಪಕರಿಗೆ ಹಾಗೂ ಮೊದಲ ಬಾರಿಯ ನಿರ್ದೇಶನಕ್ಕೆ ಸಾಮಾಜಿಕ ಕಳಕಳಿಯುಳ್ಳ ಕಥಾವಸ್ತು ಆರಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದು ನಟ ಕಿಶೋರ್ ತಿಳಿಸಿದರು.

‘ಚಿ ಸೌಜನ್ಯ’ ಚಿತ್ರವು ಐದು ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಕಿಶೋರ್, ‘ಉಗ್ರಂ’ ಮಂಜು, ಕಾಕ್ರೋಜ್ ಸುಧೀ , ಯಶ್ ಶೆಟ್ಟಿ ಮುಂತಾದವರು ನಟಿಸುತ್ತಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ.

Tags:
error: Content is protected !!