ʼಕೆಂಡ ಸಂಪಿಗೆʼ ಖ್ಯಾತಿಯ ವಿಕ್ಕಿ ವರುಣ್ ಅಭಿನಯದಲ್ಲಿ ಕೆಲವು ವರ್ಷಗಳ ಹಿಂದೆ ʼಕಾಲೇಜ್ ಕುಮಾರʼ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ʼಅಲೆಮಾರಿʼ ಸಂತು. ಇದೀಗ ಅದೇ ಹರಿ ಸಂತೋಷ್ ಮತ್ತು ವಿಕ್ಕಿ ವರುಣ್ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರದೊಂದಿಗೆ ವಾಪಸ್ಸಾಗುತ್ತಿದ್ದರೆ.
ಈ ಬಾರಿ ವಿಕ್ಕಿ ಅಭಿನಯದಲ್ಲಿ ಹರಿ ಸಂತೋಷ್, ʼಡಿಸ್ಕೋʼ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಜನವರಿಯಲ್ಲಿ ಈ ಚಿತ್ರದ ಮುಹೂರ್ತ ನಡೆಯಲಿದ್ದು, ಇತ್ತೀಚೆಗೆ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. . ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ವೆಂಕಟ್ ನಾರಾಯಣ್ ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು.
ಈ ಚಿತ್ರದ ಕುರಿತು ಮಾತನಾಡುವ ಹರಿ ಸಂತೋಷ್, ʼಇಲ್ಲಿ ನಾಯಕನ ಹೆಸರು ʼಡಿಸ್ಕೋʼ. ವಿಕ್ಕಿ ವರುಣ್ ಈ ಚಿತ್ರದ ನಾಯಕ. ಇದೊಂದು ಹಳ್ಳಿಯಲ್ಲಿ ನಡೆಯುವ ಕಥೆ. ೨೫ ವರ್ಷಗಲ ಹಿಂದೆ ಈ ತರಹದ ಜಾನರ್ನ ಸಿನಿಮಾ ಬಂದಿತ್ತು. ಅ ನಂತರ ಯಾರೂ ಈ ಕುರಿತು ಚಿತ್ರ ಮಾಡಿರಲಿಲ್ಲ, ೨೦೦೧ರಲ್ಲಿ ನಡೆದ ಒಂದು ನೈಜ ಘಟನೆಯನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇವೆ. ಇದೊಂದು ಮಾಮೂಲಿ ಚಿತ್ರವಲ್ಲ. ಬೇರೆ ರೀತಿಯ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡುತ್ತಿದ್ದೇವೆʼ ಎಂದರು.
ಇದು ವಿಕ್ಕಿ ನಾಯಕನಾಗಿ ನಟಿಸುತ್ತಿರುವ ನಾಲ್ಕನೇ ಚಿತ್ರ. ಈ ಚಿತ್ರಕ್ಕೆ ಅವರೇ ಕಥೆ ಬರೆದಿದ್ದಾರೆ. ತಮ್ಮ ಜೀವನದಲ್ಲಿ ನಡೆದ ಒಂದು ಘಟನೆಯನ್ನಾಧರಿಸಿ ಅವರು ಕಥೆ ಮಾಡಿದ್ದಾರಂತೆ. ʼಹಿಂದಿನ ಮೂರು ಚಿತ್ರಗಳೆ ಬೇರೆ ತರಹ. ಇದೇ ಬೇರೆ ತರಹ. ನಾನು ನಿಜಜೀವನದಲ್ಲಿ ಹೇಗೆ ಇದ್ದೀನೋ, ಅದೇ ತರಹ ಪಾತ್ರ ಎನ್ನಬಹುದು. ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ಇದು ಹಳ್ಳಿಯಿಂದ ಸಿಟಿಗೆ ಬರುವ ಹುಡುಗನ ಕಥೆ ಅಲ್ಲ. ಹಳ್ಳಿಯನ್ನೇ ಸಿಟಿ ಮಾಡಲು ಹೊರಟ ಹುಡುಗನ ಕಥೆ. ಹರಿ ಸಂತೋಷ್ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆʼ ಎಂದರು.
ಈ ಚಿತ್ರವನ್ನು ಕಲ್ಲೂರು ಸಿನಿಮಾಸ್ ಬ್ಯಾನರ್ ಅಡಿ ಪ್ರಶಾಂತ್ ಕಲ್ಲೂರ್ ನಿರ್ಮಿಸುತ್ತಿದ್ದಾರೆ. ಹರೀಶ್ ರೆಡ್ಡಿ ಸಹ ನಿರ್ಮಾಪಕರಾಗಿ ಕೆಲಸ ಮಾಡಲಿದ್ದಾರೆ. ಧ್ರುವ್ ಎಂಬ ಹೊಸ ಸಂಗೀತ ನಿರ್ದೇಶಕ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.