ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಹಿಂದೆ ತಮ್ಮ ಕ್ರಾಂತಿ ಚಿತ್ರದ ಪ್ರಚಾರದ ವೇಳೆ ನಡೆದ ಒಂದು ಸಂದರ್ಶನದಲ್ಲಿ ತಮ್ಮ ನೆಚ್ಚಿನ ಚಾಟ್ ಸೆಂಟರ್ ಬಗ್ಗೆ ಮಾತನಾಡಿದ್ದರು. ಬೆಂಗಳೂರಿನ ನಾಗರಭಾವಿ ಸಮೀಪ ವೀರೇಶ್ ಎಂಬ ವಿಶೇಷ ಚೇತನ ಅಭಿಮಾನಿಯೋರ್ವ ನಡೆಸುತ್ತಿದ್ದ ʼಹೊಟ್ಟೆಪಾಡುʼ ಎಂಬ ಚಾಟ್‌ಸೆಂಟರ್ ಬಗ್ಗೆ ಮಾತನಾಡಿದ್ದರು.
“ಆತ ಒಬ್ಬ ವಿಶೇಷ ಚೇತನ ಅಭಿಮಾನಿ. ಹೊರಗಡೆ ಹೋಗಿ ಭಿಕ್ಷೆ ಬೇಡದೇ ಪಾನಿಪೂರಿ ಇಟ್ಟುಕೊಂಡು ಕಷ್ಟಪಟ್ಟು ದುಡಿಯುತ್ತಿದ್ದಾನಲ್ಲ ಅದು ಗ್ರೇಟ್. ಅವನನ್ನು ಹುಡುಕಿಕೊಂಡು ಹೋಗಿ ತಿಂದರೆ, ಆತ ಇನ್ನೊಂದಷ್ಟು ಜನರಿಗೆ ಸ್ಪೂರ್ತಿಯಾಗುತ್ತಾನೆ” ಎಂದು ದರ್ಶನ್ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದರು.
ದರ್ಶನ್ ಅವರ ಈ ಸಂದರ್ಶನ ಹೊರಬಿದ್ದ ಬಳಿಕ ಇದೀಗ ಆ ವಿಶೇಷಚೇತನ ಅಭಿಮಾನಿ ವೀರೇಶ್ ಜೀವನವೇ ಬದಲಾಗಿಹೋಗಿದೆ. ಈ ಹಿಂದೆ ದಿನಕ್ಕೆ ನೂರು ಪ್ಲೇಟ್ ಮಾರಾಟವಾಗ್ತಿದ್ದ ಚಾಟ್ಸ್ ಇದೀಗ ದಿನಕ್ಕೆ ಏನಿಲ್ಲವೆಂದರೂ ಕನಿಷ್ಟ 200 ಪ್ಲೇಟ್ ಮಾರಾಟವಾಗ್ತಿದೆ. ಹೀಗಂತ ಸ್ವತಃ ವೀರೇಶ್ ʼಕನ್ನಡ ಫಿಲ್ಮಿಬೀಟ್ʼ ಜತೆ ಮಾತನಾಡುತ್ತಾ ಹೇಳಿಕೊಂಡಿದ್ದಾರೆ.




