Mysore
14
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಗೀತಾ ಪಿಕ್ಚರ್ಸ್‌ನ ನಾಲ್ಕನೇ ಚಿತ್ರ ಘೋಷಣೆ; ಧೀರನ್ ರಾಮ್‌ಕುಮಾರ್ ನಾಯಕ

‘ಭೈರತಿ ರಣಗಲ್‍’ ಚಿತ್ರದ ಯಶಸ್ಸಿನ ನಂತರ ಗೀತಾ ಶಿವರಾಜಕುಮಾರ್ ಅವರ ಗೀತಾ ಪಿಕ್ಚರ್ಸ್ ಸಂಸ್ಥೆಯು, ಶಿವರಾಜಕುಮಾರ್‍ ಅಭಿನಯದಲ್ಲಿ ‘ಎ ಫಾರ್‍ ಆನಂದ್‍’ ಎಂಬ ಚಿತ್ರವನ್ನು ನಿರ್ಮಿಸುವುದಾಗಿ ಘೋಷಣೆ ಮಾಡಿತ್ತು. ಅದಾಗಿ ಇನ್ನೂ ಒಂದು ತಿಂಗಳಾಗಿಲ್ಲ. ಗೀತಾ ಪಿಕ್ಚರ್ಸ್ ಸಂಸ್ಥೆಯಿಂದ ಇನ್ನೊಂದು ಹೊಸ ಚಿತ್ರದ ಘೋಷಣೆಯಾಗಿದೆ.

ಡಿ. 6, ಪಾರ್ವತಮ್ಮ ರಾಜಕುಮಾರ್‍ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಗೀತಾ ಪಿಕ್ಚರ್ಸ್‍ನ ನಾಲ್ಕನೇ ಚಿತ್ರವನ್ನು ಘೋಷಿಸಲಾಗಿದೆ. ಈ ಚಿತ್ರದಲ್ಲಿ ಧೀರನ್‍ ರಾಮ್‍ಕುಮಾರ್‍ ನಾಯಕನಾಗಿ ನಟಿಸಿದರೆ, ‘ಶಾಖಾಹಾರಿ’ ಚಿತ್ರವನ್ನು ನಿರ್ದೇಶಿಸಿದ್ದ ಸಂದೀಪ್‍ ಸುಂಕದ್‍ ನಿರ್ದೇಶನ ಮಾಡುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಸಂದೀಪ್ ಸುಂಕದ್, ‘ಕೆಲವು ತಿಂಗಳುಗಳಿಂದ ಕಥೆಯ ಚರ್ಚೆ ನಡೆಯುತ್ತಿತ್ತು. ಕಥೆಯನ್ನು ಶಿವಣ್ಣ ಮತ್ತು ಗೀತಾ ಶಿವರಾಜಕುಮಾರ್ ಅವರಿಗೆ ಹೇಳಿದಾಗ, ಅವರಿಗೆ ತುಂಬಾ ಇಷ್ಟವಾಯಿತು. ಕೇವಲ ಕೆಲವೇ ದಿನಗಳಲ್ಲಿ ಅವರು ಈ ಚಿತ್ರವನ್ನು ನಿರ್ಮಿಸಲು ಮುಂದಾದರು. ಇಂಥಾ ದೊಡ್ಡ ಬ್ಯಾನರ್‌ ಜೊತೆ ಎಷ್ಟೋ ನಿರ್ದೇಸಕರಿಗೆ ಕೆಲಸ ಮಾಡುವ ಆಸೆಯಿರುತ್ತದೆ. ನನ್ನ ಎರಡನೇ ಸಿನಿಮಾಗೆ ಇಂಥದ್ದೊಂದು ಅವಕಾಶ ಸಿಕ್ಕಿದ್ದನ್ನು ಪದಗಳಲ್ಲಿ ಹೇಳುವುದು ಕಷ್ಟ’ ಎಂದರು.

ಧೀರನ್ ರಾಮ್‌ಕುಮಾರ್‌ ಮಾತನಾಡಿ, ‘ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಆಫರ್‌ಗಳು ಬಂದರೂ, ನಾನು ಧೈರ್ಯವಾಗಿ ನಿರಾಕರಿಸಿ, ನನ್ನ ಮೇಲೆ ಕೆಲಸ ಮಾಡಲು ಸಮಯ ತೆಗೆದುಕೊಂಡೆ. ನನ್ನ ಎರಡನೇ ಸಿನಿಮಾ ನನ್ನ ಪ್ರತಿಭೆ ತೋರಿಸುವ ಅವಕಾಶವಾಗಬೇಕು ಅನ್ನೋ ಆಸೆ ಇತ್ತು. ಸಂದೀಪ್ ಅವರು ಕಥೆ ಹೇಳಿದಾಗ ಖುಷಿಯಾಯ್ತು. ‘ಶಾಖಾಹಾರಿ’ ಚಿತ್ರವು ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿ OTT ಮೂಲಕ ದೊಡ್ಡ ಹೆಸರು ಮಾಡಿತ್ತು. ಇಂಥಾ ತಂಡದ ಜೊತೆಗೆ ಕೆಲಸ ಮಾಡುವುದು ನನಗೆ ಸಂತೋಷ’ ಎಂದರು.

ಸದ್ಯಕ್ಕೆ ಚಿತ್ರವನ್ನು ಘೋಷಿಸವ ಪೋಸ್ಟರ್‍ ಮಾತ್ರ ಬಿಡುಗಡೆಯಾಗಿದ್ದು, ಚಿತ್ರದ ಉಳಿದ ವಿಷಯಗಳು ಸದ್ಯದಲ್ಲೇ ಬಹಿರಂಗವಾಗಲಿದೆ. ಚಿತ್ರಕ್ಕೆ ಜನವರಿಯಲ್ಲಿ ಚಿತ್ರೀಕರಣ ಪರಾರಂಭವಾಗುವ ಸಾಧ್ಯತೆ ಇದೆ.

Tags:
error: Content is protected !!