Mysore
24
haze

Social Media

ಶನಿವಾರ, 06 ಡಿಸೆಂಬರ್ 2025
Light
Dark

ಇದು ನಮ್ಮ ಮಣ್ಣಿನ ಐತಿಹಾಸಿಕ ಕಥೆ: ‘ಹಲಗಲಿ’ ಚಿತ್ರದ ‘ಫಸ್ಟ್ ರೋರ್’ ಬಿಡುಗಡೆ

dhanjya halagali first rooar

ಕನ್ನಡದಲ್ಲಿ ದೇಶಭಕ್ತಿ ಕುರಿತಾದ ಚಿತ್ರಗಳು ಹಲವು ಬಂದಿವೆಯಾದರೂ, ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲಿ ತಯಾರಾದಂತಹ ಚಿತ್ರಗಳು ಬಂದಿದ್ದು ಕಡಿಮೆಯೇ. ಈಗ ಕನ್ನಡ ಮಣ್ಣಿನ ಐತಿಹಾಸಿಕ ಚಿತ್ರವೊಂದು ಸದ್ದಿಲ್ಲದೆ ತಯಾರಾಗುತ್ತಿದ್ದು, ಚಿತ್ರಕ್ಕೆ ‘ಹಲಗಲಿ’ ಎಂದು ಹೆಸರಿಡಲಾಗಿದೆ. ಈ ಚಿತ್ರದ ಫಸ್ಟ್ ರೋರ್ ಎಂಬ ಹೆಸರಿನ ಟೀಸರ್, ಸ್ವಾತಂತ್ರ್ಯ ದಿನದ ಅಂಗವಾಗಿ ಗುರುವಾರ ಸಂಜೆ ಬಿಡುಗಡೆಯಾಗಿದೆ.

ಸುಕೇಶ್‍ ನಾಯಕ್ ನಿರ್ದೇಶನದ, ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ನಿರ್ಮಾಣದ ಬಹು ತಾರಾಗಣದ ಈ ಚಿತ್ರ, ಸ್ವಾತಂತ್ರ್ಯ ವೀರರ ಕಥೆ ಹೇಳುತ್ತದೆ. ಎರಡು ಭಾಗಗಳಲ್ಲಿ, ಐದು ಭಾಷೆಗಳಲ್ಲಿ ಪ್ಯಾನ್‍ ಇಂಡಿಯಾ ಚಿತ್ರವಗಿ ‘ಹಲಗಲಿ’ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಧನಂಜಯ್‍, ಜಡಗ ಎಂಬ ಪಾತ್ರ ಮಾಡುತ್ತಿದ್ದಾರೆ. ಸಪ್ತಮಿ ಗೌಡ ಈ ಚಿತ್ರದಲ್ಲಿ ಹೊನ್ನಿ ಎಂಬ ಪಾತ್ರ ಮಾಡುತ್ತಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ಧನಂಜಯ್, ‘ಈ ಸಿನಿಮಾದಲ್ಲಿ ನಾನು ನಿಮಿತ್ತ ಮಾತ್ರ. ನಿರ್ದೇಶಕರು ಹಾಗೂ ನಿರ್ಮಾಪಕರು ನಿಜವಾದ ಹೀರೋಗಳು. ನಾನು‌ ಮೊದಲಿನಿಂದಲೂ ಐತಿಹಾಸಿಕ ಸಿನಿಮಾ ಮಾಡಬೇಕು ಎಂದು ಹೇಳುತ್ತಿದ್ದೆ. ನನ್ನ ವೃತ್ತಿಯ ಆರಂಭದಲ್ಲಿ ಆ ರೀತಿಯ ಪ್ರಯತ್ನ ಮಾಡಿದ್ದೆವು. ಆ ನಂತರ ‘ಅಲ್ಲಮ’ ಬಯೋಪಿಕ್ ಮಾಡಿದ್ದೆ.

ಈಗ ‘ಹಲಗಲಿ’. ಐತಿಹಾಸಿಕ ಚಿತ್ರಗಳೇನೋ ಪ್ರಾರಂಭವಾಗುತ್ತವೆ. ಆದರೆ, ಬಜೆಟ್‍ ಕೊರತೆಯಿಂದಾಗಿ ಕೆಲವು ಚಿತ್ರಗಳು ನಿಲ್ಲುತ್ತವೆ. ಕೆಲವೊಮ್ಮೆ ಹಣಕಾಸಿನ ಸಮಸ್ಯೆಯಿಂದಾಗಿ, ಇಂತಹ ಚಿತ್ರಗಳಿಗೆ ನ್ಯಾಯ ಒದಗಿಸಲು ಆಗುವುದಿಲ್ಲ. ‘ಹಲಗಲಿ’ ಸ್ಕ್ರೀಪ್ಟ್ ಓದಿದೆ. ಬಹಳ ಚೆನ್ನಾಗಿ ಬರೆದಿದ್ದರು. ಓದುತ್ತಾ ಓದುತ್ತಾ ಖುಷಿಯಾಯ್ತು. ತಂಡದವರನ್ನು ಭೇಟಿಯಾದೆ. ಅವರು ಬ್ರಿಟೀಷ್ ಭಾಗದ ಚಿತ್ರೀಕರಣ ಮುಗಿಸಿದ್ದರು. ದೃಶ್ಯಗಳನ್ನು ನೋಡಿ ಖುಷಿಯಾಯಿತು. ಅಲ್ಲಿಂದ ನಂಬಿಕೆ ಬಂತು. ಹಾಗಾಗಿ, ಈ ಚಿತ್ರ ಒಪ್ಪಿಕೊಂಡೆ. ಈ ಚಿತ್ರದ ಭಾಗವಾಗಿರುವುದು ಖುಷಿ ಕೊಟ್ಟಿದೆ’ ಎಂದರು.

ನಿರ್ದೇಶಕ ಸುಕೇಶ್ ನಾಯಕ್ ಮಾತನಾಡಿ, ‘ಇದು ನನ್ನ ಎರಡನೇ ಸಿನಿಮಾ. ಒಂದು ಆಯುಧಕ್ಕಾಗಿ ಇಡೀ ಊರೇ ಪ್ರಾಣ ಕೊಟ್ಟಿತ್ತು ಎಂಬ ವಿಷಯ ಓದಿ, ನನಗೆ ಆಸಕ್ತಿ ಹುಟ್ಟುಹಾಕಿತು. ಆ ಬಳಿಕ ಪುಸ್ತಕ ಓದಿದೆ. ಆ ಊರಿಗೆ ಹೋಗಿ ವಂಶಸ್ಥರನ್ನು ಭೇಟಿಯಾದೆ. ಅವರ ಮರಿ ಮೊಮ್ಮಕ್ಕಳು ಈಗಲೂ ಇದ್ದಾರೆ. ಅವರು ಹೋರಾಟ ಮಾಡಿದ ಆಯುಧಗಳನ್ನು ದೇವರಗುಡಿಯಲ್ಲಿ ಇಟ್ಟಿದ್ದಾರೆ. ಈ ವಿಷಯವನ್ನಿಟ್ಟುಕೊಂಡು ಚಿತ್ರ ಮಾಡಬೇಕೆಂದು ಕಥೆ ಮಾಡಿಟ್ಟುಕೊಂಡೆ. ಆದರೆ, ನಿರ್ಮಾಪಕರು ಇದನ್ನು ದೊಡ್ಡ ಮಟ್ಟದಲ್ಲಿ ಮಾಡಬೇಕು ಎಂದು ಹೇಳಿದರು. ಪ್ರತಿ ದೃಶ್ಯವನ್ನೂ ಕಮರ್ಷಿಯಲ್ ಆಗಿ ಮೂಲ ಕಥೆಗೆ ಎಲ್ಲೂ ಸಮಸ್ಯೆ ಆ‍ಗದಂತೆ ಬದಲಾಯಿಸಿದ್ದೇವೆ. ಈಗಾಗಲೇ, ಶೇ. 40ರಷ್ಟು ಚಿತ್ರೀಕರಣ ಮುಗಿದಿದೆ’ ಎಂದರು.

‘ಹಲಗಲಿ’ ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಪ್ಯಾನ್‍ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ, ವಿಕ್ರಮ್ ಮೋರ್ ಸಾಹಸವಿದೆ.

Tags:
error: Content is protected !!