ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರತಂಡಕ್ಕೆ ಇನ್ನೊಂದು ಖುಷಿಯ ವಿಚಾರ. 2022ನೇ ಸಾಲಿನ ಫಿಲಂಫೇರ್ ಪ್ರಶಸ್ತಿಗಳು ಘೋಷಣೆಯಾಗಿದ್ದು, ಇದರಲ್ಲಿ ‘ಕಾಂತಾರ’ ಚಿತ್ರವು ಅತ್ಯುತ್ತಮ ಚಿತ್ರ, ನಟ ಸೇರಿದಂತೆ ಒಟ್ಟು ಆರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಫಿಲಂಫೇರ್ ಸಂಸ್ಥೆಯು ಪ್ರತೀವರ್ಷ ಹಿಂದಿಯಲ್ಲದೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ದಕ್ಷಿಣದ ನಾಲ್ಕೂ ಭಾಷೆಗಳಲ್ಲಿ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. ಈ ಪೈಕಿ 2022ನೇ ಸಾಲಿನ ಪ್ರಶಸ್ತಿಗಳನ್ನು ಕಳೆದ ವರ್ಷ ನೀಡಬೇಕಿತ್ತು. ಆದರೆ, ಕಾರಣಾಂತರಗಳಿಂದ ತಡವಾಗಿ, ಈ ವರ್ಷ ಪ್ರಶಸ್ತಿ ಪಟ್ಟಿಯನ್ನು ಘೋಷಿಸಲಾಗಿದೆ. 2022ನೇ ಸಾಲಿನ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಪ್ರಶಸ್ತಿಗಳನ್ನು ಏಕಕಾಲಕ್ಕೆ ಘೋಷಿಸಲಾಗಿದೆ.
ಈ ಪೈಕಿ ಕಾಂತಾರ ಚಿತ್ರವು ಅತ್ಯುತ್ತಮ ಚಿತ್ರ ಸೇರಿದಂತೆ ಆರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ರಿಷಭ್ ಶೆಟ್ಟಿ ಇದೇ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ಅಚ್ಯುತ್ ಕುಮಾರ್ (ಅತ್ಯುತ್ತಮ ಪೋಷಕ ನಟ), ಅಜನೀಶ್ ಲೋಕನಾಥ್ (ಅತ್ಯುತ್ತಮ ಸಂಗೀತ), ಸಾಯಿ ವಿಘ್ನೇಶ್ (ಅತ್ಯುತ್ತಮ ಗಾಯಕ) ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿಮರ್ಶಕರು ಕೊಡುವ ಅತ್ಯುತ್ತಮ ನಟಿ ಪ್ರಶಸ್ತಿಯು ಸಪ್ತಮಿ ಗೌಡ ಅವರಿಗೆ ಸಿಕ್ಕಿದೆ.
ಇದಲ್ಲದೆ ಕಿರಣ್ ರಾಜ್ (ಅತ್ಯುತ್ತಮ ನಿರ್ದೇಶಕ – 777 ಚಾರ್ಲಿ), ಚೈತ್ರಾ ಆಚಾರ್ (ಅತ್ಯುತ್ತಮ ನಟಿ – ತಲೆದಂಡ), ವಿ. ನಾಗೇಂದ್ರ ಪ್ರಸಾದ್ (ಅತ್ಯುತ್ತಮ ಗೀತರಚನೆಕಾರ – ಬನಾರಸ್), ಅತ್ಯುತ್ತಮ ಗಾಯಕಿ (ಸುನಿಧಿ ಚೌಹಾಣ್ – ವಿಕ್ರಾಂತ್ ರೋಣ) ಈ ಬಾರಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕೂ ಮೊದಲು ‘ಕಾಂತಾರ’ ಚಿತ್ರವು ಸೈಮಾ (South Indian International Movie Awards – SIIMA) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಂಟು ಪ್ರಮುಖ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. ಇನ್ನು, 2022ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಇನ್ನಷ್ಟೇ ಘೋಷಣೆಯಾಗಬೇಕಿದ್ದು, ಅಲ್ಲೂ ಪ್ರಮುಖ ಪ್ರಶಸ್ತಿಗಳನ್ನು ಗೆಲ್ಲುವ ನಿರೀಕ್ಷೆ ಇದೆ.